ಯಡಿಯಾಪುರ ಸರ್ಕಾರಿ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Spread the love

ಕುಕನೂರು: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಯಡಿಯಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸರಸ್ವತಿ ಪೂಜೆ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಿದ್ದಯ್ಯ ಹಿರೇಮಠ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಜ್ಞಾನದ ಅಧಿದೇವತೆ ಸರಸ್ವತಿಯ ಆರಾಧನೆಯೊಂದಿಗೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಸುಖಮಯವಾಗಿರಲಿ ಎಂದು ಹಾರೈಸಲಾಯಿತು.

​ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಮಂಜುನಾಥ ತಸಿಲ್ದಾರ್ ಅವರು ಮಾತನಾಡಿ, ಶಿಕ್ಷಣ ಎಂಬುದು ಬಿತ್ತುವ ಬೀಜದಂತಿದ್ದು, ಅದನ್ನು ಶ್ರದ್ಧೆಯಿಂದ ಪೋಷಿಸಿದರೆ ಭವಿಷ್ಯದಲ್ಲಿ ದೊಡ್ಡ ಮರವಾಗಿ ಫಲ ನೀಡುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಶಿಸ್ತು, ಸಂಸ್ಕಾರ ಹಾಗೂ ಉತ್ತಮ ಗುಣಗಳನ್ನು ರೂಢಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು. ಶಾಲೆಯಿಂದ ಹೊರಹೋಗುತ್ತಿರುವ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ನೆನಪಿನ ಕಾಣಿಕೆ ಹಾಗೂ ಉಡುಗೊರೆಗಳನ್ನು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.

​ಸಮಾರಂಭದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ, ಹಾಸ್ಯ ಪ್ರಹಸನ ಹಾಗೂ ಭಾಷಣ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ನೆರೆದಿದ್ದವರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಬಿನ್ನಾಳ, ದೈಹಿಕ ಶಿಕ್ಷಕರಾದ ಉಮೇಶ್ ಕಂಬಳಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ವೃಂದ, ಗ್ರಾಮದ ಹಿರಿಯರು, ಪಾಲಕರು ಹಾಗೂ ಯುವಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ವರದಿ: ಸಂಜು ವಾಲ್ಮೀಕಿ, ಯಡಿಯಾಪುರ

Leave a Reply

Your email address will not be published. Required fields are marked *