ಕುಂದಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ: ಆದರ್ಶ ಮೈಗೂಡಿಸಿಕೊಳ್ಳಲು ಯುವ ಸಮುದಾಯಕ್ಕೆ ಗಣ್ಯರಿಂದ ಕರೆ

Spread the love

ಕುಂದಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ: ಆದರ್ಶ ಮೈಗೂಡಿಸಿಕೊಳ್ಳಲು ಯುವ ಸಮುದಾಯಕ್ಕೆ ಕರೆ

ಕುಂದಗೋಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ, ಬಲಿದಾನ ಮತ್ತು ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಪಟ್ಟಣದ ಕನಕದಾಸ ಸರ್ಕಲ್‌ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಶಾಸಕ ಎಂ. ಪಾಟೀಲ್ ಹಾಗೂ ಗಣ್ಯರು ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ನಂತರ ಶಾಸಕ ಎಂ. ಪಾಟೀಲ್, ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಕೆಚ್ಚೆದೆಯ ಯೋಧನಾಗಿ ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಹೋರಾಟಗಾರರು ಅವರು. “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಆದರ್ಶ ತತ್ವಗಳನ್ನು ಇಂದಿನ ಯುವಕರಿಗೆ ತಿಳಿಸಿಕೊಡಬೇಕು. ಅವರಂತೆ ಇಂದಿನ ಯುವಕರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು. ಜೊತೆಗೆ, ಛತ್ರಪತಿ ಶಿವಾಜಿ ಮಹಾರಾಜ, ಬೆಳವಡಿ ಮಲ್ಲಮ್ಮ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರನ್ನು ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಅವರು ಮಾತನಾಡಿ, “ವೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟರು. ಅವರು ಕೇವಲ ಒಬ್ಬ ಯೋಧನಾಗಿರಲಿಲ್ಲ, ಬದಲಾಗಿ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದ್ದರು. ಕಿತ್ತೂರು ರಾಣಿ ಚೆನ್ನಮ್ಮನ ಪತನದ ನಂತರವೂ ರಾಯಣ್ಣ ತಮ್ಮ ಹೋರಾಟವನ್ನು ಮುಂದುವರಿಸಿದರು. ತಮ್ಮ ಪ್ರಾದೇಶಿಕ ಸೇನೆಯನ್ನು ಕಟ್ಟಿಕೊಂಡು, ಬ್ರಿಟಿಷರಿಗೆ ದೊಡ್ಡ ತಲೆನೋವನ್ನುಂಟು ಮಾಡಿದರು.”
ರಾಯಣ್ಣನ ಹೋರಾಟದ ಪ್ರಮುಖ ಅಂಶವೆಂದರೆ ಅವರ ಗೆರಿಲ್ಲಾ ಯುದ್ಧ ತಂತ್ರ. ಈ ತಂತ್ರದಿಂದಾಗಿ ಅವರು ಬ್ರಿಟಿಷ್ ಸೈನ್ಯವನ್ನು ಹಗಲುಗನಸಿನಲ್ಲಿಯೂ ತೀವ್ರವಾಗಿ ಹಿಮ್ಮೆಟ್ಟಿಸಿದರು. ಬ್ರಿಟಿಷರಿಂದ ಕಳೆದುಕೊಂಡ ಜಮೀನುಗಳನ್ನು ಪುನಃ ಪಡೆದು ರೈತರಿಗೆ ಹಿಂತಿರುಗಿಸುವ ಕೆಲಸ ಮಾಡಿದರು. ರಾಯಣ್ಣನ ಹುಟ್ಟಿದ ದಿನವಾದ ಆಗಸ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವಾಗಿದೆ ಮತ್ತು ಅವರನ್ನು ಗಲ್ಲಿಗೇರಿಸಿದ ದಿನ ಜನವರಿ 26, ಭಾರತ ಗಣರಾಜ್ಯದ ದಿನವಾಗಿದೆ. ಇದು ದೇಶಕ್ಕಾಗಿ ಅವರ ತ್ಯಾಗ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ತೋರಿಸುತ್ತದೆ ಎಂದು ಬೆಂತೂರ ವಿವರಿಸಿದರು.
ಸಹಕಾರಿ ಧುರೀಣ ಡಾ. ಅರವಿಂದ ಎಂ. ಕಟಗಿ ಅವರು ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ವಿ. ಎಂ. ಪಾಟೀಲ್, ಲಕ್ಷಣ ಚುಳಕಿ, ಎಸ್. ಎನ್. ಅರಳಿಕಟ್ಟಿ, ಬಿ. ಟಿ. ಗಂಗಾಯಿ, ಶಂಕರಗೌಡ ದೊಡ್ಡಮನಿ, ಬಸವರಾಜ ಕೊಪ್ಪದ, ಕಲ್ಲಪ್ಪ ಹರಕುಣಿ, ಕಲ್ಲಪ್ಪ ಗಂಗಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *