ಸೇನೆಯಿಂದ ಮರಳಿದ ಯೋಧನಿಗೆ ಗೌಡಗೇರಿ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

Spread the love

ಧಾರವಾಡ:ಕುಂದಗೋಳ ತಾಲ್ಲೂಕಿನ ಗೌಡಗೇರಿ ಗ್ರಾಮವು ತಮ್ಮದೇ ನೆಲದ ವೀರ ಯೋಧರೊಬ್ಬರಿಗೆ ಅದ್ಧೂರಿ ಸ್ವಾಗತ ಕೋರುವ ಮೂಲಕ ದೇಶಪ್ರೇಮ ಮೆರೆಯಿತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಸಹಾಯಕ ಉಪ ನಿರೀಕ್ಷಕರಾಗಿ (ASI) ಸುದೀರ್ಘ 40 ವರ್ಷಗಳ ಕಾಲ ರಾಷ್ಟ್ರಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿ ತವರಿಗೆ ಮರಳಿದ ಶಂಕರಪ್ಪ ಭೀಮಪ್ಪ ಕೆಳಗಿನಮನಿ ಅವರನ್ನು ಮಂಗಳವಾರದಂದು ಗ್ರಾಮಸ್ಥರು ಹಬ್ಬದ ವಾತಾವರಣದಲ್ಲಿ ಸ್ವಾಗತಿಸಿದರು.
ಗೌಡಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು, ಗುರು-ಹಿರಿಯರು, ಮಹಿಳೆಯರು ಹಾಗೂ ಯುವ ಮಿತ್ರರೊಂದಿಗೆ ಹೂವಿನ ಹಾರಗಳನ್ನು ಹಾಕಿ ಮೆರವಣಿಗೆ ಮೂಲಕ ಯೋಧ ಶಂಕರಪ್ಪ ಅವರನ್ನು ಬರಮಾಡಿಕೊಳ್ಳಲಾಯಿತು. ಈ ಅದ್ಧೂರಿ ಸ್ವಾಗತವು ಯೋಧರ ತ್ಯಾಗ ಮತ್ತು ಬಲಿದಾನಕ್ಕೆ ಗ್ರಾಮಸ್ಥರು ನೀಡಿದ ಗೌರವವನ್ನು ಸಾರಿತು. ನಂತರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಶಂಕರಪ್ಪ ಕೆಳಗಿನಮನಿ, ತಮ್ಮ 40 ವರ್ಷಗಳ ಸೇವಾ ಅವಧಿಯಲ್ಲಿ ಎದುರಿಸಿದ ಕಷ್ಟ ನಷ್ಟಗಳು, ದೇಶ ಕಾಯುವ ಸವಾಲುಗಳು ಮತ್ತು ಅದರಿಂದ ಪಡೆದ ಅನುಭವಗಳನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡರು. ತಮ್ಮ ಸೇವಾ ಅವಧಿಯು ಸವಾಲುಗಳಿಂದ ಕೂಡಿದ್ದರೂ, ರಾಷ್ಟ್ರಸೇವೆಗೆ ದೊರೆತ ಅವಕಾಶದಿಂದ ಸಂತಸಗೊಂಡಿರುವುದಾಗಿ ಅವರು ತಿಳಿಸಿದರು. ಅವರ ಮಾತುಗಳು ಯುವಕರಲ್ಲಿ ದೇಶಭಕ್ತಿಯನ್ನು ತುಂಬಿವಂತೆ ಭಾಸವಾದವು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಗಣ್ಯರು, ಶಂಕರಪ್ಪ ಅವರ ನಿಸ್ವಾರ್ಥ ಸೇವೆ ಹಾಗೂ ಶಿಸ್ತಿನ ಬದುಕನ್ನು ಕೊಂಡಾಡಿದರು. ಅವರ ಸೇವೆ ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಈ ಸನ್ಮಾನ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ಸೇನಾ ಸೇವೆ ಸೇರಲು ಪ್ರೇರಣೆ ನೀಡುವಂತೆ ಇತ್ತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಯೋಧರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದೇ ಸಮಯದಲ್ಲಿ ಇತ್ತಿಚ್ಚಿಗೆ ಭಾರತೀಯ ಸೇನೆಗೆ ಸೇರಿದ ಗ್ರಾಮದ ವೀರ ಯೋಧ ಕುಮಾರ. ಹ.ಯತ್ನಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಮೂಲಕ ಗೌಡಗೇರಿ ಗ್ರಾಮವು ವೀರಯೋಧನಿಗೆ ಸಲ್ಲಿಸಬೇಕಾದ ಗೌರವವನ್ನು ಸಮರ್ಪಕವಾಗಿ ಅರ್ಪಿಸಿತು.

Leave a Reply

Your email address will not be published. Required fields are marked *