
ನವಲಗುಂದ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತಾಬ್ದಿ ವರ್ಷಾಚರಣೆ ಮತ್ತು ವಿಜಯದಶಮಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಸಾವಿರಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.
ಆರ್‌ಎಸ್‌ಎಸ್ ಶತಮಾನೋತ್ಸವದ ಈ ಸಂದರ್ಭದಲ್ಲಿ ಶ್ರೀ ಶಂಕರ ಮಹಾವಿದ್ಯಾಲಯದಿಂದ ಪ್ರಾರಂಭಗೊಂಡ ಪಥಸಂಚಲನದಲ್ಲಿ ಅಲಂಕೃತ ವಾಹನದಲ್ಲಿ ಭಾರತ ಮಾತೆ ಮತ್ತು ಆರ್‌ಎಸ್‌ಎಸ್ ಸಂಸ್ಥಾಪಕರ ಭಾವಚಿತ್ರಗಳ ಮೆರವಣಿಗೆ ಸಾಗಿತು. ಗಣಪತಿ ಗುಡಿ ಸರ್ಕಲ್, ಗಾಂಧಿ ಮಾರ್ಕೆಟ್, ಹಳೆ ಪುರಸಭೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಾಲೋದ್ಯಾನ, ದ್ಯಾಮವ್ವನ ಗುಡಿ ಸರ್ಕಲ್, ಗ್ರಾಮ ಚವಡಿ, ಕಳ್ಳಿಮಠ ಓಣಿ, ತೆಗ್ಗಿನಕೇರಿ ಓಣಿ, ಲಿಂಗರಾಜ ಸರ್ಕಲ್ ಬಸ್ ಸ್ಟಾಂಡ್ ಮಾರ್ಗವಾಗಿ ಸಂಚರಿಸಿದ ಈ ಭವ್ಯ ಪಥಸಂಚಲನವು ಪುನಃ ಶಂಕರ ಮಹಾವಿದ್ಯಾಲಯದ ಮೈದಾನದಲ್ಲಿ ಸಮಾಗಮಗೊಂಡಿತು.
ಪ್ರಮುಖ ಬೀದಿಗಳಲ್ಲಿ ಸಾಗಿದ ಗಣವೇಷಧಾರಿಗಳ ಪಥಸಂಚಲನವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವಕರು ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದರು. ಹಲವು ಕಡೆ ಸಾರ್ವಜನಿಕರು ಸ್ವಯಂಸೇವಕರ ಮೇಲೆ ಹೂವುಗಳನ್ನು ಚೆಲ್ಲುವ ಮೂಲಕ ಗೌರವ ಸಮರ್ಪಿಸಿದರು. ಮೆರವಣಿಗೆಯಲ್ಲಿ ಬ್ಯಾಂಡ್ ವಾದನ ಮೊಳಗಿತು ಮತ್ತು “ಭಾರತ ಮಾತಾ ಕಿ ಜೈ” ಘೋಷಣೆಗಳು ಮುಗಿಲು ಮುಟ್ಟಿದವು.
ಹಿಂದೂ ಸಮಾಜ ಸ್ವಾಭಿಮಾನದಿಂದ ಎದ್ದು ನಿಂತಿದೆ: ಅರುಣಕುಮಾರ ಜಿ
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ್ಯಗಳ ಪ್ರಚಾರ ಪ್ರಮುಖರಾದ ಅರುಣಕುಮಾರ ಜಿ ಮಾತನಾಡಿ, “ದೇಶದ ಮೇಲೆ ಅನೇಕ ದಾಳಿಗಳು ನಡೆದರೂ, ಹಿಂದೂ ಸಮಾಜ ಸ್ವಾಭಿಮಾನದಿಂದ ಮತ್ತೆ ಎದ್ದು ನಿಂತಿದೆ. ಹಿಂದಿನ ವೈಭವ ಮರಳಿ ಬರುತ್ತಿದೆ. ಸೇವೆ, ಸಂಸ್ಕಾರ ಮತ್ತು ಶಿಕ್ಷಣದ ಮೂಲಕ ಸಂಘವು ಸಮಾಜದ ವಿಕಾಸ ಕಾರ್ಯದಲ್ಲಿ ತೊಡಗಿದೆ” ಎಂದರು. “ದೇಶದ ಶ್ರೀಮಂತ ಪರಂಪರೆ, ಜ್ಞಾನ ಮತ್ತು ಧನ ಸಂಪತ್ತು ಹಾಳಾದರೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಉಳಿದಿದೆ” ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಾವಿರಾರು ಗಣವೇಷಧಾರಿಗಳು, ಗಣ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

