​ಹನೂರು ಕುಡಿಯುವ ನೀರಿನ ಯೋಜನೆಗೆ 490 ಕೋಟಿ ರೂ. ಅನುದಾನ: ಸುತ್ತೂರು ಶ್ರೀಗಳಿಗೆ ಡಾ. ದತ್ತೇಶ್ ಕುಮಾರ್ ಕೃತಜ್ಞತೆ

Spread the love

ಹನೂರು: ಹನೂರು ವಿಧಾನಸಭಾ ಕ್ಷೇತ್ರದ ರಾಮಾಪುರ, ಮಾರ್ಟಳ್ಳಿ ಹಾಗೂ ಅಜ್ಜಿಪುರ ಭಾಗದ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಕ್ಷೇತ್ರದ ಮುಖಂಡರು ಭೇಟಿ ಮಾಡಿ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸಿದರು. ಹನೂರು ಕ್ಷೇತ್ರದ ಮುಖಂಡರಾದ ಡಾ. ಎಸ್. ದತ್ತೇಶ್ ಕುಮಾರ್ ನೇತೃತ್ವದಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ತಂಡವು, ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದಾಗಿ ಈ ಸಾಲಿನ ಬಜೆಟ್‌ನಲ್ಲಿ ಹನೂರು ಕ್ಷೇತ್ರಕ್ಕೆ ಬೃಹತ್ ನೀರಾವರಿ ಯೋಜನೆ ಘೋಷಣೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿತು.

​ಈ ಸಂದರ್ಭದಲ್ಲಿ ಮಾತನಾಡಿದ ಡಾ. ದತ್ತೇಶ್ ಕುಮಾರ್ ಅವರು, ಹನೂರು ವಿಧಾನಸಭಾ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸುತ್ತೂರು ಶ್ರೀಗಳು ತೋರಿದ ವಿಶೇಷ ಕಾಳಜಿ ಅನನ್ಯವಾದುದು ಎಂದು ಬಣ್ಣಿಸಿದರು. ಶ್ರೀಗಳ ನಿರಂತರ ಪ್ರಯತ್ನ ಹಾಗೂ ಮಾರ್ಗದರ್ಶನದ ಫಲವಾಗಿ ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಉಡುತೊರೆ ಹಳ್ಳ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆಗಾಗಿ ಬರೋಬ್ಬರಿ 490 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದೆ. ಈ ಮಹತ್ವದ ಯೋಜನೆಯಿಂದಾಗಿ ಹನೂರು ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಅಭಾವ ನೀಗಲಿದ್ದು, ಕೃಷಿ ಚಟುವಟಿಕೆಗಳಿಗೂ ಹೊಸ ಚೈತನ್ಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

​ನಮ್ಮ ಭಾಗದ ಜನರ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಬೃಹತ್ ಯೋಜನೆಗೆ ಕಾರಣಕರ್ತರಾದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳಿಗೆ ಅವರು ಸಮಸ್ತ ಜನತೆಯ ಪರವಾಗಿ ಧನ್ಯವಾದ ಅರ್ಪಿಸಿದರು. ಶ್ರೀಗಳ ಆಶೀರ್ವಾದದಿಂದ ಈ ಯೋಜನೆಯು ಶೀಘ್ರವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಂಡು ಸಮಾಜಕ್ಕೆ ಹೆಚ್ಚಿನ ಉಪಯೋಗವಾಗಲಿ ಎಂದು ಹಾರೈಸಿದ ಅವರು, ರಾಮಾಪುರ ಹೋಬಳಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಜನರ ಪರವಾಗಿ ಜಗದ್ಗುರುಗಳಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸಿದರು. ಈ ಭೇಟಿಯ ಸಂದರ್ಭದಲ್ಲಿ ಕ್ಷೇತ್ರದ ಹಿರಿಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವರದಿ: ಕಾರ್ತಿಕ್ ಗೌಡ, ಹನೂರು

Leave a Reply

Your email address will not be published. Required fields are marked *