ನಕಲಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ₹3.50 ಕೋಟಿ ದರೋಡೆ

Spread the love

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಉಪನ್ಯಾಸಕರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು ₹3.50 ಕೋಟಿ ನಗದು ಮತ್ತು 50 ಗ್ರಾಂ ಚಿನ್ನಾಭರಣ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸಕ ಗಿರಿರಾಜು ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದರೋಡೆಕೋರರು ನಕಲಿ ನೋಂದಣಿ ಸಂಖ್ಯೆಯಿದ್ದ ಕಾರಿನಲ್ಲಿ ಬಂದಿದ್ದು, ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ತಾವು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಮನೆಯೊಳಗೆ ನುಗ್ಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ದರೋಡೆ: ಮನೆಗೆ ನುಗ್ಗಿದ ನಂತರ, ದರೋಡೆಕೋರರು ಮನೆಯಲ್ಲಿದ್ದವರ ಮೊಬೈಲ್‌ಗಳನ್ನು ಕಸಿದುಕೊಂಡು, ಎಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ನಂತರ ಇಡೀ ಮನೆಯಲ್ಲಿ ಶೋಧ ನಡೆಸಿ, ಒಂದು ಬ್ಯಾಗ್‌ನಲ್ಲಿ ಇಡಲಾಗಿದ್ದ ₹3.50 ಕೋಟಿ ನಗದು ಮತ್ತು 50 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಉಪನ್ಯಾಸಕ ಗಿರಿರಾಜು ಅವರು ಜಮೀನು ಖರೀದಿಸಲು ಈ ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ದರೋಡೆಕೋರರು ಬಂದ ದಾರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಸುಳಿವು ದೊರೆತಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *