ಕೆರೆ ನೀರು ಕಲುಷಿತ: ಗ್ರಾಮ ಪಂಚಾಯತಿ ಮುಂಭಾಗ ಹೆಬ್ಬಾಳ ಗ್ರಾಮಸ್ಥರ ಪ್ರತಿಭಟನೆ ಶುದ್ಧ ನೀರು ಪೂರೈಕೆಗೆ ಆಗ್ರಹಿಸಿ ಕೆರೆಯಲ್ಲಿ ಇಳಿದು ಆಕ್ರೋಶ

Spread the love

ನವಲಗುಂದ: ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೆರೆಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಕೆರೆಯಲ್ಲಿ ಇಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಲುಷಿತ ನೀರನ್ನು ಕೂಡಲೇ ಹೊರಹಾಕಿ, ಕೆರೆಗೆ ಹೊಸದಾಗಿ ಶುದ್ಧ ನೀರು ತುಂಬಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಬಾಗ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಕೆರೆಗೆ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ನೀರು ತುಂಬಿಸುವ ಸಂದರ್ಭದಲ್ಲಿ, ಕೆರೆಯಲ್ಲಿ ಮೊದಲೇ ಇದ್ದ ಕಲುಷಿತ ನೀರನ್ನು ಹೊರಹಾಕದ ಕಾರಣ, ಪ್ರಸ್ತುತ ಕೆರೆಯ ನೀರು ಮತ್ತಷ್ಟು ಕಲುಷಿತಗೊಂಡಿದೆ. ಈ ಕುರಿತಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗದಿರುವುದರಿಂದ ಗ್ರಾಮಸ್ಥರು ಬೇಸತ್ತು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟಿಸಿದರು.

ಪಿಡಿಒ ಸಲಹೆ ತಿರಸ್ಕರಿಸಿದ ಗ್ರಾಮಸ್ಥರು
ಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಕೆರೆಯ ನೀರನ್ನು ಹೊರಹಾಕಿ ಹೊಸದಾಗಿ ನೀರು ತುಂಬಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಪಿಡಿಒ ಧರ್ಮರಾಜ ಚವ್ಹಾಣ ಅವರು ಮಾತನಾಡಿ, ಗ್ರಾಮದಲ್ಲಿನ ಕೆರೆಯ ನೀರು ಶುದ್ಧವಾಗಿದ್ದು, ಮಳೆಯಿಂದಾಗಿ ರಾಡಿಯಾಗಿದೆ. ಆದ್ದರಿಂದ ಎಲ್ಲರೂ ಕೆರೆಯ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದು ಸಲಹೆ ನೀಡಿದರು. ಆದರೆ, ಪಿಡಿಒ ಅವರ ಈ ಸಲಹೆಯನ್ನು ಒಪ್ಪದ ಗ್ರಾಮಸ್ಥರು, ಕೆರೆಯ ನೀರನ್ನು ಸಂಪೂರ್ಣವಾಗಿ ಬದಲಾಯಿಸುವಂತೆ ಹಾಗೂ ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಹಲಗಪ್ಪನವರ, ಹನುಮಂತಪ್ಪ ಸಂದನ್ನವರ, ಶಾಂತಪ್ಪ ದುಬ್ಬದಮಟ್ಟಿ, ಬಸವ್ವ ಬಾರಿಗಿಡದ, ನಿಜಗುಣಗೌಡ ಪಾಟೀಲ, ಸಿದ್ದಲಿಂಗಪ್ಪ ಯಮನೂರ, ಹೊನ್ನಪ್ಪ ದುಬ್ಬದಮಟ್ಟಿ, ಬಸಪ್ಪ ಕೊಪ್ಪದ, ಬಸವರಾಜ ದುಬ್ಬದಮಟ್ಟಿ, ಪುಂಡಲೀಕ ಸಂದನ್ನವರ, ಪಕೀರಪ್ಪ ಗೊಬ್ಬರಗುಪ್ಪಿ, ಅರ್ಜುನ ತಳವಾರ ಸೇರಿದಂತೆ ಹೆಬ್ಬಾಳ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *