ಪೊಲೀಸರ ನಡೆ ಅತ್ಯಂತ ಖಂಡನೀಯ: ಬಿಜೆಪಿ ಮಹಿಳಾ ಕಾರ್ಯಕರ್ತೆಯ ಮೇಲಿನ ದೌರ್ಜನ್ಯಕ್ಕೆ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

Spread the love

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಮತ್ತು ಅಮಾನವೀಯ ನಡವಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ. “ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಗಳು ಎಸ್‌ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಮಾಡುವುದನ್ನು ಬಿಟ್ಟು, ಅಮಾಯಕರ ಮೇಲೆ ಎಫ್‌ಐಆರ್ ದಾಖಲಿಸುವುದೇ ಕೆಲಸ ಎಂದು ಭಾವಿಸಿದಂತಿದೆ” ಎಂದು ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

​ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಅತ್ಯಂತ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟರು.

ರಾತ್ರಿ 3 ಗಂಟೆಗೆ ಮಹಿಳೆಗೆ ಕಿರುಕುಳ: ಪೊಲೀಸರ ವಿರುದ್ಧ ಗಂಭೀರ ಆರೋಪ

“ಪೊಲೀಸರು ಒಬ್ಬ ಮಹಿಳಾ ಕಾರ್ಯಕರ್ತೆಯನ್ನು ರಾತ್ರಿ 3 ಗಂಟೆಯ ಸಮಯದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಕೂಡ ಹಾಜರಿದ್ದರು ಎಂದರೆ ಇವರ ಉದ್ದೇಶವೇನು? ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ಅತ್ಯಂತ ನೀಚತನದ ಪರಮಾವಧಿ. ಈ ವಿಚಾರದಲ್ಲಿ ಪೊಲೀಸರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಡವಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ” ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯೋಚಿತ ವಿಚಾರಣೆ ನಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ ಸಚಿವರು, “ಸದರಿ ಮಹಿಳೆಯ ಮೇಲೆ ಹೊಸದಾಗಿ ನಾಲ್ಕು ಪ್ರಕರಣಗಳನ್ನು ದಾಖಲಿಸುವ ಅವಶ್ಯಕತೆಯೇನಿತ್ತು? ಅವರು ನೀಡಿದ ದೂರುಗಳನ್ನು ಪೊಲೀಸರು ಏಕ ಸ್ವೀಕರಿಸುತ್ತಿಲ್ಲ? ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ತಕ್ಷಣವೇ ನ್ಯಾಯೋಚಿತ ವಿಚಾರಣೆ ನಡೆಯದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ” ಎಂದು ಎಚ್ಚರಿಸಿದರು.

ಕಾಂಗ್ರೆಸ್‌ನಿಂದ ತುಷ್ಟೀಕರಣದ ಪರಮಾವಧಿ

ಕಾಂಗ್ರೆಸ್ ಪಕ್ಷವು ಕೇವಲ ಅಧಿಕಾರ ಕಳೆದುಕೊಳ್ಳುವ ಭಯ ಮತ್ತು ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದೆ. ಎಸ್‌ಐಆರ್‌ನಿಂದಾಗಿ ತಮ್ಮ ಮತಬ್ಯಾಂಕ್ ಕುಸಿಯುತ್ತದೆ ಎಂಬ ಆತಂಕದಿಂದ ಇಂತಹ ದೌರ್ಜನ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ‘ವಿಬಿ-ಜಿ ರಾಮ್ ಜಿ’ ಯೋಜನೆಯನ್ನು ವಿರೋಧಿಸುವುದರ ಹಿಂದೆಯೂ ಇವರ ಇದೇ ಕುತಂತ್ರ ಅಡಗಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

​ಈ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹಾಗೂ ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *