

ಕುಂದಗೋಳ: ವಿಶ್ವನಾಯಕ ಹಾಗೂ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ಕುಂದಗೋಳ ಮಂಡಲ ವತಿಯಿಂದ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಶಾಸಕ ಎಂ.ಆರ್. ಪಾಟೀಲ ಅವರು ಚಾಲನೆ ನೀಡಿದರು. ಈ ಸಮಯದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು, ಬ್ರೆಡ್ ಹಾಗೂ ಬಿಸ್ಕತ್ಗಳನ್ನು ವಿತರಿಸಿದರು.
ಸೆ. 17ರಿಂದ ಅ. 2ರವರೆಗೆ ಸೇವಾ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸೆಪ್ಟೆಂಬರ್ 17ರಿಂದ ಗಾಂಧಿ ಜಯಂತಿಯಾದ ಅಕ್ಟೋಬರ್ 2ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಕ್ಷವು ನಿರ್ಧರಿಸಿದೆ. ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರ ಮತ್ತು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆಯಂತಹ ಕಾರ್ಯಕ್ರಮಗಳ ಮೂಲಕ ಜನಸೇವೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಮೋದಿ ವಿಶ್ವಗುರು: ಶಾಸಕರಿಂದ ಪ್ರಶಂಸೆ
ಪ್ರಧಾನಿ ಮೋದಿಯವರನ್ನು “ವಿಶ್ವಗುರು” ಎಂದು ಬಣ್ಣಿಸಿದ ಶಾಸಕರು, “ವಿಶ್ವಾದ್ಯಂತ ಮೋದಿಯವರನ್ನು ಈ ಮಟ್ಟಿಗೆ ಗುರುತಿಸಲಾಗುತ್ತಿದೆ. ಎಲ್ಲರನ್ನೂ ಜೊತೆಗೂಡಿಸಿ, ದೇಶವನ್ನು ಅಭಿವೃದ್ಧಿಪಡಿಸುವ ಅವರ ದೃಷ್ಟಿಕೋನಕ್ಕೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇದುವರೆಗೆ ನಡೆದುಕೊಂಡು ಬಂದಿದ್ದಾರೆ” ಎಂದು ಪ್ರಶಂಸಿಸಿದರು.
ಅಲ್ಲದೇ, 370ನೇ ವಿಧಿಯ ರದ್ದತಿ, ಜಿಡಿಪಿ ಬೆಳವಣಿಗೆಯಂತಹ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ, ಅವು ಅವರ ನಾಯಕತ್ವದ ಕಿರೀಟಕ್ಕೆ ಸೇರಿದ ಮೈಲುಗಲ್ಲುಗಳು ಎಂದು ಹೇಳಿದರು.

ಆಸ್ಪತ್ರೆ ಅಭಿವೃದ್ಧಿಗೆ ₹1.20 ಕೋಟಿ
ತಾಲ್ಲೂಕು ಆಸ್ಪತ್ರೆಯ ಅಭಿವೃದ್ಧಿ ಕುರಿತು ಮಾತನಾಡಿದ ಶಾಸಕರು, ಆಸ್ಪತ್ರೆಗೆ 1.20 ಕೋಟಿ ರೂಪಾಯಿ ಅನುದಾನವನ್ನು ತರಲಾಗಿದೆ. ಹಣ ಹಂಚಿಕೆ ಸಮಯದಲ್ಲಿ ಹುಬ್ಬಳ್ಳಿ ಮತ್ತು ಕುಂದಗೋಳಕ್ಕೆ ತಲಾ 60 ಲಕ್ಷ ರೂಪಾಯಿ ಎಂದು ವಿಂಗಡಿಸಲಾಗಿತ್ತು. ಆದರೆ, ತಾಲ್ಲೂಕು ಆಸ್ಪತ್ರೆ ಕುಂದಗೋಳದಲ್ಲಿರುವುದರಿಂದ ಅವಶ್ಯಕತೆಗನುಗುಣವಾಗಿ ಸಂಪೂರ್ಣ ಹಣವನ್ನು ಇಲ್ಲಿಯೇ ಬಳಸಲು ಸಿಇಒ ಅವರಿಗೆ ಮನವಿ ಮಾಡಿದ್ದು, ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಈ ಹಣವನ್ನು ಬಳಸಲಾಗುತ್ತದೆ. ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿ, ಪೇವರ್ಸ್ಗಳನ್ನು ಅಳವಡಿಸಲಾಗುತ್ತದೆ. ರೋಗಿಗಳ ಜೊತೆಗೆ ಬಂದವರಿಗೆ ಊಟ ಮತ್ತು ವಿಶ್ರಾಂತಿ ವ್ಯವಸ್ಥೆಗಾಗಿ ಕಟ್ಟೆಗಳನ್ನು ನಿರ್ಮಿಸಲಾಗುತ್ತದೆ. ಇದಲ್ಲದೆ, ಶವಾಗಾರ (ಮರ್ಚುರಿ)ದ ಸುತ್ತಮುತ್ತಲ ಪ್ರದೇಶವನ್ನು ಸಹ ಸ್ವಚ್ಛಗೊಳಿಸಿ ಸುಧಾರಣೆ ಮಾಡಲಾಗುವುದು. ಬಂದಂತಹ ರೋಗಿಗಳಿಗೆ ಉತ್ತಮ ಸೌಲಭ್ಯ ಸಿಗಬೇಕು ಮತ್ತು ಅವರನ್ನು ಉಪಚರಿಸಲು ಬಂದವರಿಗೂ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಶಾಸಕರು ನುಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗನಗೌಡ ಸಾತ್ಮರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಪಕ್ಷದ ಮುಖಂಡರಾದ ಡಿ.ವೈ.ಲಕ್ಕನಗೌಡ್ರು, ಮಾಲತೇಶ್ ಶಾಗೋಟಿ, ಪ್ರಕಾಶ್ ಪಾಟೀಲ, ಬಸವರಾಜ್ ಕೊಪ್ಪದ, ಪೃಥ್ವಿರಾಜ್ ಕಾಳೆ, ಬಿ.ಟಿ.ಗಂಗಾಯಿ, ಬಸವರಾಜ್ ನಾವಳ್ಳಿ, ಈರಣ್ಣ ಕಲಕುಟಕರ್, ಪಕ್ಕಜ ಕೋರಿ, ಫಕೀರಯ್ಯ ಎತ್ತಿನಮಠ, ತೋಟಪ್ಪ ಪಾಟೀಲ, ಬಿ.ಡಿ.ಪಾಟೀಲ, ವಾಗೇಶ ಮನಕಟ್ಟಿಮಠ, ಚನ್ನಪ್ಪ ಹುಂಬಿ, ಯಲ್ಲರೆಡ್ಡಿ ಯರಗುಪ್ಪಿ, ಎಲ್ಲಪ್ಪ ಡೊಳ್ಳಿನ, ವೀಣಾ ಹನಿ, ಸಂತೋಷ ಮಲ್ಲಿಗವಾಡ, ರಮೇಶ ಮೇಲ್ಮಳಗಿ, ರಾಜುಗೌಡ ಪಾಟೀಲ, ವಿಠ್ಠಲ್ ಚವಾನ್, ಕೋಟೆಪ್ಪ ತಳಗೇರಿ, ಹನುಮಂತಪ್ಪ ಮೇಲಿನಮನಿ, ಶಂಭು ದೇಸಾಯಿ, ರಮೇಶ ಕನಕನವರ್, ಅಶೋಕ್ ನೀಲಗುಂದ, ಹರೀಶ್ ಕೊನೇರಿ, ಪ್ರದೀಪ್ ಕಾಳೆ, ಸಿದ್ದು ಧಾರವಾಡ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

