
ನವದೆಹಲಿ: ಆನ್ಲೈನ್ ಗೇಮಿಂಗ್ ಆ್ಯಪ್ ‘ಮೊಬೈಲ್ ಪ್ರೀಮಿಯರ್ ಲೀಗ್’ (ಎಂಪಿಎಲ್) ತನ್ನ ಶೇ. 60ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಣ ಕಟ್ಟಿ ಆಡಲಾಗುವ ಆನ್ಲೈನ್ ಆಟಗಳನ್ನು ನಿಷೇಧಿಸಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಲಾಗಿದೆ.
ಸರ್ಕಾರದ ಈ ನಿರ್ಧಾರವು ದೇಶದ ಆನ್ಲೈನ್ ಗೇಮಿಂಗ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದ್ದು, ಅದರ ಪರಿಣಾಮವಾಗಿ ಸಿಬ್ಬಂದಿ ವಜಾಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಂಪನಿಗಳು ಮುಂದಾಗಿವೆ. ಎಂಪಿಎಲ್ ಕಂಪನಿಯ ಮಾರ್ಕೆಟಿಂಗ್, ಹಣಕಾಸು, ಕಾರ್ಯಾಚರಣೆ, ಎಂಜಿನಿಯರಿಂಗ್ ಮತ್ತು ಕಾನೂನು ವಿಭಾಗದಲ್ಲಿನ ಒಟ್ಟು 500 ಸಿಬ್ಬಂದಿಯಲ್ಲಿ ಅಂದಾಜು 300 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ.
ಈ ಕುರಿತು ಕಂಪನಿಯ ಉದ್ಯೋಗಿಗಳಿಗೆ ಇ-ಮೇಲ್ ಮಾಡಿರುವ ಸಿಇಒ ಸಾಯಿ ಶ್ರೀನಿವಾಸ್, “ಕಂಪನಿಗೆ ಶೇ. 50ರಷ್ಟು ವರಮಾನವು ಭಾರತದಿಂದಲೇ ಬರುತ್ತಿತ್ತು. ಆದರೆ ಸರ್ಕಾರದ ಹೊಸ ಕಾನೂನಿನಿಂದಾಗಿ ಭವಿಷ್ಯದಲ್ಲಿ ಆದಾಯ ಸಂಗ್ರಹಿಸುವ ಸಾಧ್ಯತೆ ಇಲ್ಲ. ಹೀಗಾಗಿ, ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಕೆಲಸ ಕಳೆದುಕೊಳ್ಳಲಿರುವವರಿಗೆ ಕಂಪನಿಯಿಂದ ಅಗತ್ಯ ನೆರವು ನೀಡಲಾಗುವುದು” ಎಂದು ತಿಳಿಸಿದ್ದಾರೆ. ಆದರೆ, ಎಷ್ಟು ಜನರನ್ನು ವಜಾಗೊಳಿಸಲಾಗುತ್ತಿದೆ ಎಂಬುದನ್ನು ಇ-ಮೇಲ್ನಲ್ಲಿ ಸ್ಪಷ್ಟಪಡಿಸಿಲ್ಲ.
ಕಳೆದ ವರ್ಷ ಎಂಪಿಎಲ್ನ ಭಾರತದ ವರಮಾನ 7,881 ಕೋಟಿ ರೂಪಾಯಿ ಆಗಿತ್ತು. ಈ ಕುರಿತು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಎಂಪಿಎಲ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

