
ಬೆಂಗಳೂರು: ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ದೇಶದ ಪ್ರಜೆಯನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಿಕೋಜಿ ಹೇಡಾಹಾ ಎಂದು ಗುರುತಿಸಲಾಗಿದೆ.
ಬಂಧಿತನಿಂದ 2 ಕೆಜಿ 36 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ₹2.30 ಕೋಟಿ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ₹13,000 ನಗದು, ತೂಕದ ಯಂತ್ರ ಮತ್ತು ದ್ವಿಚಕ್ರ ವಾಹನವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಾಗಲೂರಿನ ಸಂತೆ ವೃತ್ತದ ಬಳಿ ಆರೋಪಿ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ 2011ರಲ್ಲಿ ಬ್ಯುಸಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಬೆಂಗಳೂರಿನಲ್ಲಿ ನೆಲೆಸಿದ್ದ. ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸುತ್ತಿದ್ದ ಆತ, ನಗರದ ಹೊರವಲಯದ ಕಾಲೇಜುಗಳು ಮತ್ತು ಪೇಯಿಂಗ್ ಗೆಸ್ಟ್ಗಳ ಬಳಿ ಮಾರಾಟ ಮಾಡುತ್ತಿದ್ದ.
ಈ ಹಿಂದೆ ಕೂಡ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪೊಲೀಸರು ಚಿಕೋಜಿ ಹೇಡಾಹಾನನ್ನು ಬಂಧಿಸಿದ್ದರು. ಆದರೆ, ಕಾರಾಗೃಹದಿಂದ ಹೊರಬಂದ ಬಳಿಕ ಮತ್ತೆ ಅದೇ ಕೃತ್ಯವನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ 9591484307