ಅಣ್ಣಿಗೇರಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಧಾರವಾಡ ಪ್ರಭಾರ ಡಿ.ಸಿ. ಭುವನೇಶ ಪಾಟೀಲ ಭೇಟಿ; ತುರ್ತು ಪರಿಹಾರಕ್ಕೆ ಶಾಸಕ ಸೂಚನೆ

Spread the love

ಅಣ್ಣಿಗೇರಿ : ಬುಧವಾರ ರಾತ್ರಿ ಅಣ್ಣಿಗೇರಿ ಪಟ್ಟಣ ಹಾಗೂ ಸುತ್ತಮುತ್ತ ಸುರಿದ ಭಾರೀ ಮತ್ತು ನಿರಂತರ ಮಳೆಯಿಂದಾಗಿ ಪಟ್ಟಣದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ತಕ್ಷಣವೇ ಪಟ್ಟಣಕ್ಕೆ ಆಗಮಿಸಿ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಾವೃತ ಬಡಾವಣೆಗಳಿಗೆ ಭೇಟಿ, ಪರಿಹಾರಕ್ಕೆ ಆದೇಶ

ಶಾಸಕ ಕೋನರಡ್ಡಿ ಅವರು ಜಲಾವೃತಗೊಂಡಿದ್ದ ಸುರಕೋಡ್ ಬಡಾವಣೆ, ರಾಜರಾಜೇಶ್ವರಿ ಬಡಾವಣೆ ಮತ್ತು ಜೆ.ಎಸ್.ಎಸ್. ಕಾಲೋನಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಬಡಾವಣೆಗಳಿಂದ ನೀರನ್ನು ಹೊರಹಾಕಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ವೈ. ಜಿ. ಗದ್ದಿಗೌಡರ್ ಅವರಿಗೆ ಸೂಚಿಸಿದರು.

“ತಕ್ಷಣ ಜೆಸಿಬಿ ಬಳಸಿಕೊಂಡು ನೀರು ಹರಿಯಲು ದಾರಿ ಮಾಡಬೇಕು ಮತ್ತು ಮೋಟಾರ್ ಪಂಪ್ ಬಳಸಿ ಬಡಾವಣೆಗಳಿಂದ ನೀರನ್ನು ಹೊರಹಾಕಬೇಕು. ಬಡಾವಣೆಗಳಲ್ಲಿ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು” ಎಂದು ಶಾಸಕರು ಸ್ಥಳದಲ್ಲಿದ್ದ ಜನರಿಗೆ ಭರವಸೆ ನೀಡಿದರು.

ಸಿಡಿಲು ಬಡಿದು ಮೃತಪಟ್ಟ ಕುರಿಗಳಿಗೆ ಧನ ಸಹಾಯ

ಪಟ್ಟಣದ ಬೆಂತೂರ ರಸ್ತೆಯ ಹೊಲದಲ್ಲಿ ಸಿಡಿಲು ಬಡಿದು ಮಲ್ಲಪ್ಪ ಬೆಳ್ಳಿಕೊಪ್ಪ ಎಂಬುವವರ 7 ಕುರಿಗಳು ಸಾವನ್ನಪ್ಪಿದ ಸ್ಥಳಕ್ಕೆ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಭೇಟಿ ನೀಡಿದರು. ಘಟನೆಯನ್ನು ಪರಿಶೀಲಿಸಿ, ಕುರಿಗಾಹಿಗೆ ತಕ್ಷಣ ಧನ ಸಹಾಯ ಮಾಡಿದರು. ಸಿಡಿಲು ಬಡಿದು ಕುರಿಗಳು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಪಂಚನಾಮೆ ಮಾಡಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ನೀಡಲು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಮನೆಗಳ ಹಾನಿ ಸಮೀಕ್ಷೆ ಮತ್ತು ಒತ್ತುವರಿ ತೆರವಿಗೆ ಸೂಚನೆ

ಮಳೆಯಿಂದಾಗಿ ಅಣ್ಣಿಗೇರಿ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾಗಶಃ ಹಾನಿಯಾಗಿರುವ ಮನೆಗಳ ಕುರಿತು ಸಮೀಕ್ಷೆ ನಡೆಸಿ, ಸರ್ಕಾರದ ಆದೇಶದಂತೆ ತಕ್ಷಣ ಪರಿಹಾರ ಬಿಡುಗಡೆ ಮಾಡಲು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಅನೇಕ ಲೇಔಟ್‌ಗಳಲ್ಲಿ ರಸ್ತೆ, ಚರಂಡಿಗಳ ಒತ್ತುವರಿ ಹಾಗೂ ಪಟ್ಟಣದ ವಿವಿಧೆಡೆ ರಾಜಕಾಲುವೆಗಳ ಒತ್ತುವರಿ ಆಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. “ಈ ಒತ್ತುವರಿಗಳಿಂದಾಗಿ ಮಳೆ ನೀರು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಆಗುತ್ತಿದೆ. ಈ ಕುರಿತು ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಅಣ್ಣಿಗೇರಿ ಪಟ್ಟಣ ಸುಂದರವಾಗಿ ರೂಪಗೊಳ್ಳಲು ಎಲ್ಲರೂ ಸಹಕರಿಸಬೇಕು” ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ತಹಶೀಲ್ದಾರ್ ಎಂ.ಜಿ. ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಕಂದಾಯ ಅಧಿಕಾರಿ ರಿಷಿಕುಮಾರ್ ಸಾರಂಗಿ, ಗ್ರಾಮ ಲೆಕ್ಕಾಧಿಕಾರಿ ಎಮ್.ಎಸ್. ಪಾಟೀಲ್, ಪುರಸಭೆ ಸದಸ್ಯರುಗಳಾದ ಈಶ್ವರ ಕಾಳಪ್ಪನವರ, ಮಂಜುನಾಥ್ ಮಾಯಣ್ಣವರ, ಚಂದ್ರಣ್ಣ ಸುರಕೋಡ, ಚಂಬಣ್ಣ ಸುರಕೋಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬಡಾವಣೆ ನಿವಾಸಿಗಳು ಮತ್ತು ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *