

ನವಲಗುಂದ: ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಮುಡುಪಾಗಿಟ್ಟು, ತಮ್ಮ ಆಸ್ತಿಗಳನ್ನೆಲ್ಲ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟ ತ್ಯಾಗವೀರ ಸಿರಸಂಗಿ ಲಿಂಗರಾಜರ ಸಮಾಧಿ ಸ್ಥಳ ಹಾಗೂ ಅವರು ವಾಸಿಸುತ್ತಿದ್ದ ವಾಡೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ಘೋಷಿಸಿದರು.
ಪಟ್ಟಣದ ಥಡಿಮಠದಲ್ಲಿರುವ ತ್ಯಾಗವೀರ ಲಿಂಗರಾಜರ ಸಮಾಧಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಸಮಾಜ ಬಾಂಧವರನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ರಾಜಕಾರಣದಲ್ಲಿ ನೈತಿಕತೆಯಿಂದ ಬದುಕಿದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ, ಮಾಜಿ ಉಪರಾಷ್ಟ್ರಪತಿ ದಿ. ಬಿ.ಡಿ. ಜತ್ತಿ ಅವರಂತಹ ಮಹಾನ್ ವ್ಯಕ್ತಿಗಳು ಸಿರಸಂಗಿ ಲಿಂಗರಾಜರು ಸ್ಥಾಪಿಸಿದ ವಿದ್ಯಾರ್ಥಿ ವೇತನದಲ್ಲಿ ವಿದ್ಯಾಭ್ಯಾಸ ಮಾಡಿದ ಮಹನೀಯರಾಗಿದ್ದಾರೆ. ಅಂತಹ ಮಹಾನ್ ತ್ಯಾಗಿಯ ಸಮಾಧಿ ಹಾಗೂ ವಾಡೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಅವರ ತ್ಯಾಗ ಹಾಗೂ ಸಾಮಾಜಿಕ ಜೀವನ ಕುರಿತಾಗಿ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಚಿವರು ನುಡಿದರು. ವಾಡೆಯನ್ನು ಸ್ವಂತ ಖರ್ಚಿನಲ್ಲಿ ಯಥಾಸ್ಥಿತಿಯಲ್ಲಿ ಮರು ನಿರ್ಮಾಣ ಮಾಡಲಾಗುವುದು ಎಂದೂ ಅವರು ಭರವಸೆ ನೀಡಿದರು.
ದೇವಸ್ಥಾನ ಅಭಿವೃದ್ಧಿಗೆ ₹25 ಲಕ್ಷ ಭರವಸೆ
ನಂತರ ಸಚಿವರು ಲಿಂಗರಾಜರ ಆಡಳಿತಾವಧಿಯಲ್ಲಿ ಆಶ್ರಯ ಪಡೆದಿದ್ದ ಸೂಫಿ ಸಂತರ ಆಸಾರ ದರ್ಗಾ, ಹಾಗೂ ಪೇಶ್ವೆಗಳ ಕಾಲದಲ್ಲಿ ನಿರ್ಮಾಣವಾದ ಲಿಂಗರಾಜ ಟ್ರಸ್ಟ್ ಅಧೀನದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಅವರು ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ₹25 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಸಚಿವರ ವೈಯಕ್ತಿಕ ಕಾಳಜಿಗೆ ಶಾಸಕರಿಂದ ಅಭಿನಂದನೆ
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸಿರಸಂಗಿ ಲಿಂಗರಾಜರ ಸಮಾಧಿ ಹಾಗೂ ವಾಡೆ ಅಭಿವೃದ್ಧಿ ಕುರಿತಾಗಿ ಟ್ರಸ್ಟ್ ಅಧ್ಯಕ್ಷರಾದ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇದೀಗ ಸಚಿವ ಎಂ.ಬಿ. ಪಾಟೀಲ್ ಅವರು ವೈಯಕ್ತಿಕ ಕಾಳಜಿಯಿಂದ ₹25 ಲಕ್ಷ ವೆಚ್ಚದಲ್ಲಿ ಲಿಂಗರಾಜರ ಸಮಾಧಿ ಹಾಗೂ ವಾಡೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಲಿಂಗರಾಜ ಟ್ರಸ್ಟ್ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಟ್ರಸ್ಟ್ ನಿರ್ದೇಶಕರಾದ ಸೋಮನಾಥಗೌಡ ಪಾಟೀಲ್, ಬಿ.ಬಿ. ಪಾಟೀಲ್, ಲಿಂಗರಾಜ ಸರದೇಸಾಯಿ, ಸುರೇಶಗೌಡ ಬಿರಾದಾರ, ಶಿವಕುಮಾರಗೌಡ ಕಮಿಟಿ ಹಳ್ಳದ, ಬಸವರಾಜ ಪಾಟೀಲ್, ರವಿ ಕುಡವಕ್ಕಲಿಗೇರ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸಮಾಜದ ತಾಲೂಕಾಧ್ಯಕ್ಷ ನಿಂಗಪ್ಪ ಹರಿವಾಳದ, ನಾಗಪ್ಪ ಸಂಗಟಿ, ಮಂಜು ಸುಭೇದಾರ, ಪ್ರಕಾಶ ಶಿಗ್ಲಿ, ಬಸವರಾಜ ಸೋಮಗೊಂಡ, ಲಕ್ಷ್ಮಣ ಹಳ್ಳದ, ಲಕ್ಷ್ಮಣ ಜವಳಗಿ, ಗಂಗಪ್ಪ ಹಳ್ಳದ ಮತ್ತಿತರರು ಉಪಸ್ಥಿತರಿದ್ದರು.

