
ಕುಂದಗೋಳ: ಸಹಕಾರಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹಲವು ಉದ್ಯೋಗಾವಕಾಶಗಳಿವೆ ಎಂದು ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ದಾನಪ್ಪಗೌಡರ ಹೇಳಿದರು.
ತಾಲೂಕಿನ ಸಂಶಿ ಗ್ರಾಮದ ಕೆಎಲ್‌ಇ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ ನಿಯಮಿತ, ಬೆಂಗಳೂರು, ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಕೆಎಲ್‌ಇ ಕಾಲೇಜಿನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕ್ಲಸ್ಟರ್ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸಹಕಾರಿ ರಂಗ ಬೆಳೆದು ಬಂದ ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ ಯ. ಅತ್ತಿಗೇರಿ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿ ಯೂನಿಯನ್‌ನಿಂದ ಅಗತ್ಯ ಸಹಾಯ ಮತ್ತು ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆಐಸಿಎಂ ಅಧಿಕಾರಿ ವೆಂಕನಗೌಡ ಪಾಟೀಲ, ಬೆಂಗಳೂರಿನ ಪತ್ರಕರ್ತೆ ಸುಧಾ ಪಾಟೀಲ, ಕಾಲೇಜಿನ ಸಿಬ್ಬಂದಿ ಆರ್.ಜಿ. ಮಣಕಟ್ಟಿ ಮತ್ತು ಡಾ. ಎಂ.ಸಿ. ಅಂಗಡಿ ಉಪಸ್ಥಿತರಿದ್ದರು. ಸಿ.ಎಸ್. ಗುರುಮಠ ಕಾರ್ಯಕ್ರಮ ನಿರೂಪಿಸಿದರು. ಅಮಿತಾ ಉಪ್ಪಿನ ವಂದಿಸಿದರು.

