
ದಸರಾ ಒಡೆಯರ್ ಕಪ್‌ನಲ್ಲಿ ಕಂಚು; ಕುಸ್ತಿಯಲ್ಲಿ ಚಿನ್ನದ ಸಾಧನೆ; ಪ್ರಶಂಸೆಗಳ ಮಹಾಪೂರ
ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಹುಬ್ಬಳ್ಳಿಯ ಕ್ರೀಡಾಪಟು ಮಂಜವ್ವ ಸೋಮಪ್ಪ ಸನಾದಿ ಅವರು ಎರಡು ವಿಭಿನ್ನ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮಂಜವ್ವ ಸನಾದಿ ಅವರು ಮೈಸೂರಿನಲ್ಲಿ ಜರುಗಿದ ಐದನೇ ರಾಜ್ಯ ಮಟ್ಟದ ದಸರಾ ಒಡೆಯರ್ ಕಪ್ 2025ರ ಸ್ಪರ್ಧೆಯಲ್ಲಿ ಕರ್ನಾಟಕ ಪ್ಯಾರಾಥ್ಲೋಬಾಲ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸಿ ಯಶಸ್ವಿಯಾಗಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಅಲ್ಲದೆ, ಇದೇ ಅವಧಿಯಲ್ಲಿ ಆಯೋಜಿಸಲಾಗಿದ್ದ 9ನೇ ವಿಶೇಷ ಚೇತನ ಮಹಿಳೆಯರ ಪಂಚ ಕುಸ್ತಿ ಬಂದಾವಳಿಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶೇಷ ಚೇತನ ಕ್ರೀಡಾಪಟುವಾಗಿ, ಮೈಸೂರಿನಲ್ಲಿ ನಡೆದ ಈ ಎರಡು ಪ್ರಮುಖ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಮಂಜವ್ವ ಸನಾದಿ ಅವರು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಈ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

