ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರ ನೆರವಿಗೆ ‘ಮಹಾಯುತಿ’ ಮೈತ್ರಿಕೂಟ: ಒಂದು ತಿಂಗಳ ಸಂಬಳ ದಾನ

Spread the love

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ನೆರವಾಗಲು ಆಡಳಿತರೂಢ ‘ಮಹಾಯುತಿ’ ಮೈತ್ರಿಕೂಟವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಪಕ್ಷಗಳ ಶಾಸಕರು ಹಾಗೂ ಸಚಿವರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ.

ಮಹಾರಾಷ್ಟ್ರ ಸಚಿವರು ಮತ್ತು ಸಂಸದರೂ ಸಹ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಲಿದ್ದಾರೆ ಎಂದು ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳು ಪ್ರತ್ಯೇಕವಾಗಿ ಪ್ರಕಟಿಸಿವೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಗಣ್ಯರ ಭೇಟಿ:
ಮರಾಠವಾಡ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದ ಸೋಲಾಪುರ ಜಿಲ್ಲೆಯಲ್ಲಿ ಕೃಷಿ, ಜಾನುವಾರು, ಮನೆಗಳು ಮತ್ತು ಉದ್ಯಮಗಳಿಗೆ ವ್ಯಾಪಕ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಹಾಗೂ ಅಜಿತ್ ಪವಾರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.

ಫಡಣವೀಸ್ ಅವರು ಸೋಲಾಪುರ ಮತ್ತು ಲಾತೂರ್ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯರು ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿದರು. ಸೋಲಾಪುರದ ಕರ್ಮಲಾ ತಾಲ್ಲೂಕಿನಲ್ಲಿ ರೈತರಿಗೆ ಧೈರ್ಯ ತುಂಬಿದರು. ಅದೇ ರೀತಿ ಶಿವಸೇನಾ ನಾಯಕ ತಾನಾಜಿ ಸಾವಂತ್ ಅವರೊಂದಿಗೆ ಧಾರಾಶಿವ ಜಿಲ್ಲೆಗೆ ಭೇಟಿ ನೀಡಿದ ಏಕನಾಥ ಶಿಂದೆ ಅವರು ಸ್ಥಳೀಯರೊಂದಿಗೆ ಚರ್ಚಿಸಿ, ಪರಿಹಾರ ಕ್ರಮಗಳ ಬಗ್ಗೆ ಭರವಸೆ ನೀಡಿದರು. ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ನಾಯಕರು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *