ಗಣಪತಿ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಇಲ್ಲ: ಸಂಶಿ ಗ್ರಾಮಸ್ಥರಿಂದ ಪಂಚಾಯತಿ ವಿರುದ್ಧ ಆಕ್ರೋಶ

Spread the love

ಸಂಶಿ: (ಧಾರವಾಡ) ಗಣೇಶ ಹಬ್ಬದ ವಿಸರ್ಜನಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಸೂಕ್ತ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ, ತಾಲ್ಲೂಕಿನ ಸಂಶಿ ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಗಣಪತಿ ವಿಸರ್ಜನೆಗೆಂದು ಸಂಶಿ ಕೆರೆ ಬಳಿ ಬಂದಿದ್ದ ಭಕ್ತರು, ಪಂಚಾಯತಿಯ ನಿರ್ಲಕ್ಷ್ಯದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಘಟನೆಯ ಬಗ್ಗೆ ಮಾತನಾಡಿದ ಗ್ರಾಮಸ್ಥರೊಬ್ಬರು, “ಗಣಪತಿ ವಿಸರ್ಜನೆಗೆ ಬಂದಾಗ ಕೆರೆಗೆ ಹೋಗುವ ರಸ್ತೆಯಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಭಕ್ತರ ಕಾಲಿಗೆ ಹೊಸಲು ಮೆತ್ತಿಕೊಳ್ಳುತ್ತಿದೆ. ನಮ್ಮ ಊರಿನಲ್ಲಿ ಗ್ರಾಮ ಪಂಚಾಯಿತಿಯವರು ಇದ್ದಾರೋ ಗೊತ್ತಿಲ್ಲ. ಇದು ಕೇವಲ ಒಂದು ಶಿಷ್ಟಾಚಾರದ ರೀತಿ ಮಾಡಿದ್ದಾರೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಒಂದೇ ಒಂದು ಲೈಟ್ ಇಲ್ಲ, ಸೋಲಾರ್ ಲೈಟ್ ಕೂಡಾ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಬ್ಬ ಭಕ್ತರು ಮಾತನಾಡಿ, “ನಾವು ಮನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಗಣಪತಿ ಪೂಜೆ ಮಾಡುತ್ತೇವೆ. ಆದರೆ ವಿಸರ್ಜನೆಗೆ ಬಂದಾಗ ಇಲ್ಲಿಯ ಪರಿಸ್ಥಿತಿ ನೋಡಿದರೆ ಅಸಹ್ಯವಾಗುತ್ತದೆ. ನಮ್ಮ `ಮಡಿ’ಯಿಂದ ಪೂಜೆ ಮಾಡಿದ ಗಣಪತಿಯನ್ನು ಈ ರೀತಿ ಗಲೀಜು ವಾತಾವರಣದಲ್ಲಿ ವಿಸರ್ಜಿಸುವುದು ನೋವು ತಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಟಪಾಲಗೇರಿ ಯುವಕ ಮಂಡಳದ ಮುಖ್ಯ ಪ್ರತಿನಿಧಿಯೊಬ್ಬರು ಮಾತನಾಡಿ, “ಗಣಪತಿಯ ಸದ್ಭಕ್ತರು ವಿನಂತಿ ಮಾಡಿಕೊಳ್ಳುತ್ತಾ ಇದ್ದೇವೆ. ಐದು ದಿನಗಳ ಕಾಲ ಶ್ರದ್ಧೆ, ಭಕ್ತಿಯಿಂದ ಎಲ್ಲರೂ ಮನೆಯಲ್ಲಿ ಗಣಪತಿಯನ್ನ ಪೂಜೆ ಮಾಡಿರುತ್ತೇವೆ. ಗಣಪತಿ ವಿಸರ್ಜನೆ ಮಾಡುವಾಗ ಈ ರೀತಿ ಗಲೀಜು ಮಾಡಿರುವುದು ಭಕ್ತರಿಗೆ ನೋವುಂಟು ಮಾಡಿದೆ. ದಯಮಾಡಿ ಮುಂದಿನ ವರ್ಷವಾದರೂ ಗ್ರಾಮ ಪಂಚಾಯತಿ ಕಚೇರಿಯವರು ವಿಸರ್ಜನಾ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿ, ಸೋಲಾರ್ ದೀಪಗಳನ್ನು ಅಳವಡಿಸಿ, ಗಣಪತಿ ವಿಸರ್ಜನೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ನಮ್ಮ ಟಪಾಲಗೇರಿ ಯುವಕ ಮಂಡಳದಿಂದ ಸಂಶಿ ಗ್ರಾಮ ಪಂಚಾಯತಿಗೆ ಯಾವತ್ತೂ ಧಿಕ್ಕಾರ ಇರುತ್ತದೆ” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು “ಧಿಕ್ಕಾರ! ಧಿಕ್ಕಾರ! ಗ್ರಾಮ ಪಂಚಾಯತಿಗೆ ಧಿಕ್ಕಾರ!” ಎಂದು ಘೋಷಣೆಗಳನ್ನು ಕೂಗಿದರು. ಗ್ರಾಮಸ್ಥರ ಈ ವಿನಂತಿಯು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ತನ್ನ ಕರ್ತವ್ಯ ನಿರ್ವಹಣೆಯನ್ನು ಉತ್ತಮಪಡಿಸಿಕೊಳ್ಳಲು ಪ್ರೇರಣೆ ನೀಡುವ ನಿರೀಕ್ಷೆ ಇದೆ. ತಾಲ್ಲೂಕು ಆಡಳಿತವೇ ನಿವಾದರೂ ಎಚ್ಚತ್ತು ಈ ಗ್ರಾಮದತ್ತ ತಿರುಗಿ ನೋಡಿ ಇದನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *