

ಕುಂದಗೋಳ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 5 ವರ್ಷಗಳ ಅವಧಿಯ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ರಾಜ್ಯ ಸರ್ಕಾರವು ಶಿಕ್ಷಣ ಕಲಿಕೆಗೆ ದಿಟ್ಟ ಹೆಜ್ಜೆ ಇಟ್ಟು ಸಾಕ್ಷರತೆಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಂಶಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಗಿರೀಶಗೌಡ್ರ ಪಾಟೀಲ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರದಂದು ತಾಲೂಕಿನ ಸಂಶಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಂಶಿ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ನಡೆದ “ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಾಕ್ಷರತಾ ಸಪ್ತಾಹ” ನಿಮಿತ್ತ ಆಯೋಜಿಸಿದ್ದ ಬೀದಿ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕ್ಷರತೆಯ ಹಕ್ಕು ಪಡೆಯಲು ಕರೆ:
ಕ್ಷೇತ್ರದ ಅನಕ್ಷರಸ್ಥ ಜನರು ಶಿಕ್ಷಣ ಕಲಿಕೆಗೆ ಮುಂದೆ ಬಂದು ಸಮಾಜದಲ್ಲಿ ಸಂವಿಧಾನಾತ್ಮಕವಾದ ಶಿಕ್ಷಣದ ಹಕ್ಕನ್ನು ಪಡೆಯುವ ಮನೋಭಾವದ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಹನಮಂತ ಎಸ್. ಲಕ್ಷ್ಮೇಶ್ವರ ಅವರು ಮಾತನಾಡಿ, ಕುಂದಗೋಳ ತಾಲೂಕು ಕ್ಷೇತ್ರದ ಸಂಶಿ, ಶಿರೂರ, ಮಳಲಿ ಮುಂತಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯು ಸ್ಥಳೀಯ ಎನ್.ಜಿ.ಒ. ಮೂಲಕ ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಕ್ಷರತಾ ಶಿಕ್ಷಣ, ಬೀದಿ ನಾಟಕ ಹಾಗೂ ಜಾನಪದ ಕರಪತ್ರಗಳ ಮೂಲಕ ಅರಿವು ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಡಿಜಿಟಲ್ ಯುಗದಲ್ಲಿ ಸಾಕ್ಷರತೆ ಮುಖ್ಯ:
ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಜಿಲ್ಲೆಯ ಸಾಕ್ಷರತಾ ಮತ್ತು ವಯಸ್ಕರ ಶಿಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಅವರು, ಸ್ಪರ್ಧಾತ್ಮಕ ಡಿಜಿಟಲ್ ಯುಗದಲ್ಲಿ ಅನಕ್ಷರಸ್ಥರನ್ನು ಸಾಕ್ಷರತೆ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಪ್ರಮುಖ ಗುರಿ. ಸಂಶಿಯ ಎನ್.ಜಿ.ಒ. ಸಂಸ್ಥೆಯ ಕಲಾ ತಂಡದಿಂದ ಆಯ್ಕೆಯಾದ ಗ್ರಾಮಗಳಲ್ಲಿ ಅರ್ಧಮರ್ಧ ಅಥವಾ ಶಿಕ್ಷಣ ಅಕ್ಷರ ಕಲಿಕೆ ಇಲ್ಲದ ಜನರನ್ನು ಗುರುತಿಸಿ, ಸಂಪೂರ್ಣ ಸಾಕ್ಷರತಾ ಶಿಕ್ಷಣ ನೀಡುವುದಕ್ಕೆ ಇಲಾಖೆಯು ಪ್ರಥಮ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಸಾಕ್ಷರತಾ ಇಲಾಖೆಯಿಂದ ಪ್ರತಿಯೊಬ್ಬ ಅನಕ್ಷರಸ್ಥರಿಗೂ ಓದು, ಬರಹ ಮತ್ತು ಲೇಕಾಚಾರ (ಲೆಕ್ಕಾಚಾರ) ಬೋಧನೆ ಮತ್ತು ಮೌಲ್ಯಮಾಪನ ನಡೆಸಿ, ಆ ಜನರನ್ನು ಸಮಾಜ ಮುಖಿಯಾಗಿ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಇಲಾಖೆಯಿಂದ ನೆರವು ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಪಿ. ಸೂಲದ, ಗ್ರಾ.ಪಂ. ಸದಸ್ಯ ಫಕ್ಕೀರೇಶ ಪಶುಪತಿಹಾಳ, ಎನ್.ಜಿ.ಒ. ಮುಖ್ಯಸ್ಥ ಎಚ್.ಎಸ್. ಹಿರೇಗೌಡ್ರ, ಮುತ್ತು ಸೊರಟಿ, ಜಗದೀಶ ದ್ಯಾವನೂರ, ಶಿವು ಕುರಟ್ಟಿ, ಮಂಜುನಾಥ ಪಡತೇರ, ಸಂತೋಷ ನಾಯ್ಕರ, ಪಕ್ಕೀರೇಶ ಮುಡ್ಸಿಬಣ, ಹರೀಶ ಸಾಳುಂಕೆ, ಮಲ್ಲಿಕಾರ್ಜುನ ಹಡಪದ ಮುಂತಾದವರು ಪಾಲ್ಗೊಂಡಿದ್ದರು.

