​ರಾಜ್ಯ ಸರ್ಕಾರಕ್ಕೆ ‘ಕ್ರೆಡಲ್‌’ನಿಂದ ₹77.17 ಕೋಟಿ ಡಿವಿಡೆಂಡ್; ಸಿಎಂ ಪರಿಹಾರ ನಿಧಿಗೆ ₹5 ಕೋಟಿ ದೇಣಿಗೆ

Spread the love

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು (KREDL) 2024-25ನೇ ಸಾಲಿನಲ್ಲಿ ಭರ್ಜರಿ ಲಾಭ ಗಳಿಸಿದ್ದು, ಸರ್ಕಾರಕ್ಕೆ ಸಲ್ಲಿಸಬೇಕಾದ ಲಾಭಾಂಶ (ಡಿವಿಡೆಂಡ್) ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯ ಮೊತ್ತದ ಚೆಕ್ ಅನ್ನು ಗುರುವಾರ ಹಸ್ತಾಂತರಿಸಲಾಯಿತು.

​ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಟ್ಟು 77,17,50,000 ರೂ.ಗಳ ಡಿವಿಡೆಂಡ್ ಚೆಕ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಮೊತ್ತದ ಪ್ರತ್ಯೇಕ ಚೆಕ್ ಅನ್ನು ಹಸ್ತಾಂತರಿಸಿದರು.

ನಿವ್ವಳ ಲಾಭದಲ್ಲಿ ದಾಖಲೆ:

ಕ್ರೆಡಲ್‌ ಸಂಸ್ಥೆಯು 2024-25ನೇ ಆರ್ಥಿಕ ಸಾಲಿನಲ್ಲಿ ಒಟ್ಟು 257.25 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ಈ ಒಟ್ಟು ಲಾಭದ ಪೈಕಿ ಶೇ. 30ರಷ್ಟು ಮೊತ್ತವನ್ನು ಡಿವಿಡೆಂಡ್ ರೂಪದಲ್ಲಿ ಸರ್ಕಾರಕ್ಕೆ ನೀಡಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಂಸ್ಥೆಯು ಸಾಧಿಸಿರುವ ಈ ಆರ್ಥಿಕ ಪ್ರಗತಿಯು ಗಮನಾರ್ಹವಾಗಿದೆ.

​ಈ ಸಂದರ್ಭದಲ್ಲಿ ಕ್ರೆಡಲ್ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ. ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *