
ಧಾರವಾಡ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕಾದಂಬರಿಕಾರ ಹಾಗೂ ತತ್ವಜ್ಞಾನಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘವು ತೀವ್ರ ಸಂತಾಪ ಸೂಚಿಸಿದೆ. ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೈರಪ್ಪನವರು ಇಂದು ಮಧ್ಯಾಹ್ನ ನಿಧನರಾದ ಸುದ್ದಿ ತಿಳಿದು ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ.
ತಮ್ಮ ಅನನ್ಯ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡಾ. ಭೈರಪ್ಪ ಅವರು ಅಪಾರ ಓದುಗರನ್ನು ಸೃಷ್ಟಿಸಿದ್ದರು. ‘ವಂಶವೃಕ್ಷ’, ‘ಪರ್ವ’, ‘ಆವರಣ’, ‘ಯಾನ’, ‘ಉತ್ತರಕಾಂಡ’ ಸೇರಿದಂತೆ ಅವರ ಇಪ್ಪತ್ತೈದು ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದವು. ತಮ್ಮ ಬರಹಗಳ ಮೂಲಕ ಭಾರತೀಯ ತತ್ವಚಿಂತನೆ ಮತ್ತು ಆಧುನಿಕ ಬದುಕಿನ ಸಂಘರ್ಷಗಳನ್ನು ಅನಾವರಣಗೊಳಿಸಿದ್ದ ಇವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಕನ್ನಡ ಸಾಹಿತ್ಯ ಲೋಕಕ್ಕೆ ಡಾ. ಭೈರಪ್ಪ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸಂಘದ ವತಿಯಿಂದ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಚಂದ್ರಕಾಂತ ಬೆಲ್ಲದ, ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಹಾಗೆಯೇ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಪ್ರೊ. ಶಶಿಧರ ತೋಡಕರ, ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ಮತ್ತು ಪ್ರೊ. ಧನವಂತ ಹಾಜವಗೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಡಾ. ಎಸ್.ಎಲ್. ಭೈರಪ್ಪ ಅವರ ಸಾಹಿತ್ಯವು ಮುಂದಿನ ತಲೆಮಾರಿಗೂ ದಾರಿದೀಪವಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

