
ಬೆಂಗಳೂರು (ಅ. 31): ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಈ ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ ನೀಡಿ ಹುತಾತ್ಮರಾದವರು. ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸಾರಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಭೂಕ್ರಾಂತಿ ಮತ್ತು ಬ್ಯಾಂಕ್ ರಾಷ್ಟ್ರೀಕರಣ
ಬಡತನ ನಿವಾರಣೆಗೆ ಇಂದಿರಾ ಗಾಂಧಿಯವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇಂದಿಗೂ ಜೀವಂತವಾಗಿವೆ ಎಂದು ಉಪ ಮುಖ್ಯಮಂತ್ರಿ ಸ್ಮರಿಸಿದರು. ಇಂದಿರಾ ಗಾಂಧಿಯವರ ಕನಸಿನ ‘ಉಳುವವನೇ ಭೂಮಿಯ ಒಡೆಯ’ ಯೋಜನೆಯನ್ನು ರಾಜ್ಯದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದು ಲಕ್ಷಾಂತರ ಬಡವರಿಗೆ ಭೂಮಿ ಹಂಚಿದರು. ಇದರಿಂದ ಪ್ರತಿಯೊಂದು ತಾಲ್ಲೂಕಿನಲ್ಲಿ 10 ರಿಂದ 15 ಸಾವಿರ ರೈತರು ಫಲಾನುಭವಿಗಳಾದರು. ಇಡೀ ದೇಶದಲ್ಲಿಯೇ ಇಂತಹ ಭೂಕ್ರಾಂತಿ ಎಲ್ಲಿಯೂ ಆಗಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೆಮ್ಮೆಯಿಂದ ಹೇಳಿದರು.
ಅಲ್ಲದೆ, ಇಂದಿರಾ ಗಾಂಧಿಯವರ ಬ್ಯಾಂಕ್ಗಳ ರಾಷ್ಟ್ರೀಕರಣದ ನಿರ್ಧಾರ ಜನಸಾಮಾನ್ಯರ ಬದುಕಿಗೆ ನೆರವಾಯಿತು. ಸಣ್ಣ ಆರ್ಥಿಕ ಬೆಂಬಲಕ್ಕೂ ಕಷ್ಟಪಡುತ್ತಿದ್ದ ಜನರಿಗೆ ಸುಲಭವಾಗಿ ಸಾಲ ದೊರೆಯುವಂತಾಗಿ, ದೇಶದ ಆರ್ಥಿಕ ಸಂಕಷ್ಟ ಶಮನಕ್ಕೆ ಇದು ನಾಂದಿಯಾಯಿತು. ಇದರಿಂದಲೇ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರು ಸಾಲ ಮೇಳಗಳನ್ನು ಏರ್ಪಡಿಸಿ, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ₹5 ಸಾವಿರದಿಂದ ₹10 ಸಾವಿರದ ತನಕ ಸಾಲ ನೀಡಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರು ಎಂದು ಅವರು ನೆನಪಿಸಿಕೊಂಡರು.
ರಾಹುಲ್ ಗಾಂಧಿಗೆ ಸಿಕ್ಕ ಸೌತೆಕಾಯಿಯ ಆಶೀರ್ವಾದ
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ಲಕ್ಷಾಂತರ ಬಡವರ ಬದುಕು ಬದಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಡಿ.ಕೆ. ಶಿವಕುಮಾರ್ ಒಂದು ಘಟನೆಯನ್ನು ಹಂಚಿಕೊಂಡರು. ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮೂರು ಬಳಿ ಒಬ್ಬ ಅಜ್ಜಿಯೊಬ್ಬರು ರಾಹುಲ್ ಗಾಂಧಿಯವರಿಗೆ ಸೌತೆಕಾಯಿ ನೀಡಿ ಆಶೀರ್ವಾದ ಮಾಡಿದ್ದರು. ಆ ವೇಳೆ ಆ ಅಜ್ಜಿ, “ನಿಮ್ಮ ಅಜ್ಜಿ (ಇಂದಿರಾ ಗಾಂಧಿ) ನೀಡಿದ ಭೂಮಿಯಲ್ಲಿ ಬೆಳೆದ ಬೆಳೆ” ಎಂದು ಹೇಳಿದ್ದರು. ಇದು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳಿಂದ ಎಂದು ಉಪ ಮುಖ್ಯಮಂತ್ರಿ ಹೇಳಿದರು.

