
ಚೆಕ್ ಬೌನ್ಸ್ ತಪ್ಪಿಸಲು ಆರ್ಬಿಐನಿಂದ ಹೊಸ ವ್ಯವಸ್ಥೆ
ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಗ್ರಾಹಕರಿಗೆ ತ್ವರಿತ ಮತ್ತು ಹೆಚ್ಚು ಸುರಕ್ಷಿತ ಸೇವೆಯನ್ನು ಒದಗಿಸುವ ಉದ್ದೇಶದಿಂದ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೂತನ ಆದೇಶವನ್ನು ಹೊರಡಿಸಿದೆ. ಇಂದಿನಿಂದ (ಆಗಸ್ಟ್ 4) ಎಲ್ಲಾ ಬ್ಯಾಂಕ್ಗಳು ಒಂದೇ ದಿನದಲ್ಲಿ ಚೆಕ್ ವಿಲೇವಾರಿ (ಕ್ಲಿಯರೆನ್ಸ್) ಮಾಡಲಿವೆ ಎಂದು ಆರ್ಬಿಐ ಹೇಳಿದೆ.
ಈ ಹಿಂದೆ ಗ್ರಾಹಕರು ನೀಡಿದ ಚೆಕ್ಗಳು ವಿಲೇವಾರಿ ಆಗಲು 2 ರಿಂದ 3 ದಿನಗಳು ಬೇಕಾಗುತ್ತಿದ್ದವು. ಈ ಹೊಸ ವ್ಯವಸ್ಥೆಯಿಂದಾಗಿ ಚೆಕ್ ಬೌನ್ಸ್ ಆಗುವುದನ್ನು ತಡೆಗಟ್ಟಲು ಹಾಗೂ ವಿಳಂಬ ಅಥವಾ ನಿರಾಕರಣೆಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
2 ಹಂತದಲ್ಲಿ ಅನುಷ್ಠಾನ
ಈ ಹೊಸ ವ್ಯವಸ್ಥೆಯು ಎರಡು ಹಂತಗಳಲ್ಲಿ ಜಾರಿಗೆ ಬರಲಿದೆ. ಶನಿವಾರದಿಂದ ಪ್ರಾಯೋಗಿಕವಾಗಿ ಜಾರಿಯಾಗಲಿರುವ ಈ ವಿಧಾನವು, ಎರಡನೇ ಹಂತದಲ್ಲಿ 2026ರ ಜನವರಿ 3 ರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆ.
50 ಸಾವಿರ ರೂ. ಮೇಲಿನ ಚೆಕ್ಗಳಿಗೆ ಹೊಸ ನಿಯಮ
ಆರ್ಬಿಐ ನಿರ್ದೇಶನದ ಪ್ರಕಾರ, ಖಾತೆದಾರರು ₹50,000 ಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಗಳನ್ನು ಠೇವಣಿ ಮಾಡುವಾಗ ಕೆಲವು ಹೆಚ್ಚುವರಿ ವಿವರಗಳನ್ನು ಬ್ಯಾಂಕಿಗೆ ಒದಗಿಸಬೇಕಾಗುತ್ತದೆ. ಅವುಗಳೆಂದರೆ, ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ದಿನಾಂಕ, ಮೊತ್ತ ಮತ್ತು ಫಲಾನುಭವಿಯ ಹೆಸರು.
ಈ ಎಲ್ಲಾ ವಿವರಗಳು ಸರಿಯಾಗಿದ್ದರೆ ಮಾತ್ರ ಬ್ಯಾಂಕ್ಗಳು ಒಂದೇ ದಿನದಲ್ಲೇ ಚೆಕ್ಗಳನ್ನು ವಿಲೇವಾರಿ ಮಾಡಲಿವೆ. ಒಂದು ವೇಳೆ ವಿವರಗಳಲ್ಲಿ ಲೋಪದೋಷಗಳಿದ್ದರೆ, ಚೆಕ್ಗಳನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ. ಆಗ ಗ್ರಾಹಕರು ಮತ್ತೊಮ್ಮೆ ಹೊಸದಾಗಿ ಸರಿಯಾದ ಚೆಕ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ಮೂಲಕ, ಚೆಕ್ ಬೌನ್ಸ್ ಆಗುವುದನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಆರ್ಬಿಐ ಹೊಂದಿದೆ.

