
ಪಬ್ಲಿಕ್ ಸಮಾಚಾರ
ಗುಡಗೇರಿ (ಕುಂದಗೋಳ): ಕುಂದಗೋಳ ತಾಲ್ಲೂಕಿನ ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟದ ವಿರುದ್ಧ ಪೊಲೀಸ್ ಇಲಾಖೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಅಕ್ಟೋಬರ್ 21 ರಿಂದ 23, 2025ರವರೆಗೆ ಕೇವಲ ಮೂರು ದಿನಗಳ ಅವಧಿಯಲ್ಲಿ ಐದು ಪ್ರತ್ಯೇಕ ದಾಳಿಗಳನ್ನು ನಡೆಸಿ, ಜೂಜಾಟದ ಜಾಲವನ್ನು ಭೇದಿಸಿದೆ. ಈ ಕಾರ್ಯಾಚರಣೆಗಳ ಮೂಲಕ ಒಟ್ಟು 29 ಜನರ ಮೇಲೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ವರದಿಯಾದಂತೆ, ಒಬ್ಬ ಆರೋಪಿಯು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾನೆ. ಈ ಎಲ್ಲಾ ಜೂಜಾಟದ ಪ್ರಕರಣಗಳು ‘ಅಂದರ್-ಬಾಹರ್’ ಎಂಬ ನಶೀಬಿನ ಜೂಜಾಟಕ್ಕೆ ಸಂಬಂಧಿಸಿವೆ.
ಗುಡಗೇರಿ ಠಾಣಾ ಪೊಲೀಸರು ಗುಡಗೇರಿ, ಗೌಡಗೇರಿ, ಲಕ್ಷ್ಮೀಶ್ವರ ಮತ್ತು ಕಳಸ ಗ್ರಾಮಗಳ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಎಲ್ಲಾ ಐದು ಪ್ರಕರಣಗಳ ದಾಳಿಯ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳ ಸಮೇತ ಒಟ್ಟು ₹24,295/- (ಇಪ್ಪತ್ತನಾಲ್ಕು ಸಾವಿರದ ಇನ್ನೂರ ತೊಂಬತ್ತೈದು ರೂಪಾಯಿಗಳು) ನಗದನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 21-10-2025 ರಂದು ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 14 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಒಟ್ಟು ₹9,760/- ನಗದು ವಶಪಡಿಸಿಕೊಳ್ಳಲಾಗಿದೆ. ದಿನಾಂಕ 22-10-2025 ರ ಬೆಳಗಿನ ಜಾವ ನಡೆದ ಕಾರ್ಯಾಚರಣೆಯಲ್ಲಿ 7 ಜನರ ಮೇಲೆ ಎಫ್ಐಆರ್ ದಾಖಲಿಸಿ ₹5,110/- ನಗದನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ದಿನಾಂಕ 23-10-2025 ರಂದು ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 12 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ದಾಳಿಗಳಲ್ಲಿ ₹9,325/- ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಗುಡಗೇರಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧಿತರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

