
ಹುಬ್ಬಳ್ಳಿ: ನಗರದ ಕೊಪ್ಪಿಕರ ರಸ್ತೆಯ ಮೇದಾರ ಓಣಿಯ ಬಳಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಹುಬ್ಬಳ್ಳಿ ಶಹರ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 6ರ ರಾತ್ರಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ.
ಕಾಲ್ತುಳಿತದಿಂದ ಶುರುವಾದ ಜಗಳ: ತನಿಖೆಯ ವೇಳೆ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ, ರಾತ್ರಿ ಕೊಪ್ಪಿಕರ ರಸ್ತೆ ಬಳಿ ಇದ್ದ ಯುವಕರ ತಂಡದ ನಡುವೆ ಸಣ್ಣ ಕಾಲ್ತುಳಿತವೊಂದು ಗಂಭೀರ ಸ್ವರೂಪ ಪಡೆದುಕೊಂಡಿದೆ. ವಾಗ್ವಾದ ತಾರಕಕ್ಕೇರಿ ಮಾರಾಮಾರಿ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರು ಯಾರು?
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರನ್ನು ರಾಕೇಶ್ ಬಿಜವಾಡ್ (26), ಶಿವಕುಮಾರ್ ಢವಳೇಶ್ವರ (24), ಶ್ರೀ ಗೋಕಾಕ್ (21) ಮತ್ತು ಫಕ್ಕೀರೇಶ್ ದೊಡ್ಡಮನಿ (20) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೋನಿಯಾ ಗಾಂಧಿನಗರ ಮತ್ತು ಸೆಟ್ಲಮೆಂಟ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಅಲ್ಲದೆ, ಓರ್ವ ಅಪ್ರಾಪ್ತ ಬಾಲಕನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

