ಚಳ್ಳಕೆರೆ ಬಳಿ ಭೀಕರ ರಸ್ತೆ ಅಪಘಾತ: ಮೂವರು ಆರ್‌ಎಸ್‌ಐ ಸಾವು; ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ

Spread the love

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು (RSI) ಸಾವನ್ನಪ್ಪಿರುವ ಘಟನೆ ತೀವ್ರ ವಿಷಾದ ಮೂಡಿಸಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

​ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ (CAR) ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ದಾರಿಮನಿ, ಅಮರೀಶ್ ಬರ್ಗಿ ಹಾಗೂ ಸಚೀನ್ ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ನೇಮಕಗೊಂಡು, ಕಠಿಣ ಪರಿಶ್ರಮ ಮತ್ತು ಕನಸುಗಳೊಂದಿಗೆ ವೃತ್ತಿ ಜೀವನ ಆರಂಭಿಸಿದ್ದರು. ಅಪಘಾತದಲ್ಲಿ ಪಿಎಸ್ಐ ಈಶ್ವರ್ ಮತ್ತು ಆರ್‌ಎಸ್‌ಐ ಮಹಾಂತೇಶ್ ಬೊಮ್ಮನ್ನವರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಘಟನಾ ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಗೃಹ ಸಚಿವರು, ಮೃತರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. “ನಿರಂತರ ಅಭ್ಯಾಸ ಮತ್ತು ಶ್ರಮದಿಂದ ಇಲಾಖೆಗೆ ಸೇರಿದ್ದ ಯುವ ಅಧಿಕಾರಿಗಳನ್ನು ಕಳೆದುಕೊಂಡಿರುವುದು ಇಲಾಖೆಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಗಾಯಗೊಂಡ ಅಧಿಕಾರಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ ಸಚಿವರು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

​ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ

Leave a Reply

Your email address will not be published. Required fields are marked *