
ಬೆಂಗಳೂರು: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದ ಯುವತಿ ಮಾನ್ಯ ಎಂಬಾಕೆಯ ಮರ್ಯಾದಾಗೇಡು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸಂತ್ರಸ್ತ ಕುಟುಂಬಕ್ಕೆ ತ್ವರಿತ ನ್ಯಾಯ ಒದಗಿಸಲು ವಿಶೇಷ ಕ್ರಮಗಳನ್ನು ಪ್ರಕಟಿಸಿದೆ. ಈ ಪ್ರಕರಣದ ವಿಚಾರಣೆಗಾಗಿ ‘ತ್ವರಿತಗತಿ ನ್ಯಾಯಾಲಯ’ (Fast-track Court) ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, “ಇದು ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣವಾಗಿದೆ. ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ನಿಯಮದಂತೆ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ (Charge sheet) ಸಲ್ಲಿಸಲು ಸೂಚಿಸಲಾಗಿದೆ. ಕಾನೂನು ಹೋರಾಟವನ್ನು ಬಲಪಡಿಸಲು ಈ ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು (Private Prosecutor) ನೇಮಕ ಮಾಡಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಮರ್ಯಾದಾಗೇಡು ಹತ್ಯೆ ತಡೆಗೆ ವಿಶೇಷ ಕಾನೂನು:
ಜಾತಿ ಆಧಾರಿತ ಹಿಂಸೆ, ಮದುವೆಗೆ ಬಲವಂತಪಡಿಸುವುದು ಹಾಗೂ ಮರ್ಯಾದಾಗೇಡು ಹತ್ಯೆಗಳಂತಹ ಹೀನ ಕೃತ್ಯಗಳು ಮಾನವ ಸಮಾಜವೇ ತಲೆತಗ್ಗಿಸುವಂತಹವು. ಇಂತಹ ಘಟನೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು, ಭವಿಷ್ಯದಲ್ಲಿ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಮತ್ತು ಜನರಲ್ಲಿ ಕಾನೂನಿನ ಭಯ ಹುಟ್ಟಿಸಲು ‘ವಿಶೇಷ ಕಾನೂನು’ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಹೊಸ ಕಾನೂನಿನ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸುವುದು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಿಎಂ ಪುನರುಚ್ಚರಿಸಿದ್ದಾರೆ

