



ಕುಂದಗೋಳ: ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯತಿಗೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುದುವಾರದಂದು ಚುನಾವಣೆ ನಡೆಯಿತು.
ಒಟ್ಟು 11 ಸದಸ್ಯ ಬಲ ಹೊಂದಿರುವ ಈ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ ಹಾಗೂ ಸುಮಿತ್ರಾಬಾಯಿ ಪ್ರಕಾಶ ಕದಂ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ ಅವರು 7 ಮತಗಳನ್ನು ಪಡೆದು ಜಯಶಾಲಿಯಾದರು, ಹಾಗೂ ಸುಮಿತ್ರಾಬಾಯಿ ಪ್ರಕಾಶ ಕದಂ ಅವರು 4 ಮತಗಳನ್ನು ಪಡೆದು ಪರಾಭವಗೊಂಡರು. ಇದರಿಂದ ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಜಗದೀಶ್ ಕಮ್ಮಾರ ಆಯ್ಕೆ ಘೋಷಿಸಿದರು.
ಈ ಸಮಯದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ ಅವರಿಗೆ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗುರು-ಹಿರಿಯರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಅವರು, ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕುಂಕುರು, ತೀರ್ಥ ಹಾಗೂ ಮಳಲಿ ಗ್ರಾಮಗಳ ಸರ್ವ ಸದಸ್ಯರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಇದಕ್ಕೆ ಗ್ರಾಮದ ಹಿರಿಯರ ಸಹಕಾರ ಮುಖ್ಯ ಎಂದು ಹೇಳಿದರು.
ನಂತರ ಸದಸ್ಯ ಗುರುನಾಥಗೌಡ ಪಾಟೀಲ ಮಾತನಾಡಿ, ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ನಾವೆಲ್ಲ ಒಂದೇ. ಎಲ್ಲರೂ ಸೇರಿಕೊಂಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಲಹೆ ಪಡೆದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣ. 3 ಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪಣತೊಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಗುರುನಾಥಗೌಡ ಬ. ಪಾಟೀಲ, ಮಂಜುನಾಥ ಗಂ. ದೊಡ್ಡಗೌಡ್ರ, ಮಾನಪ್ಪ ದ್ಯಾ. ಬಡಿಗೇರ, ಲಕ್ಷ್ಮೀ ಗು. ಕಳ್ಳಿಮನಿ, ಚನ್ನವ್ವ ಕ. ಸಂಶಿ, ಪಿಡಿಒ ನಾಗರಾಜ ಉಳ್ಳೆಸೂರ ಸೇರಿದಂತೆ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

