ವಿದ್ಯೆ ವ್ಯಕ್ತಿತ್ವ ರೂಪಿಸಬೇಕು, ಸ್ವಾವಲಂಬಿ ಬದುಕಿಗೆ ದಾರಿಯಾಗಬೇಕು: ಲೀಲಾವತಿ ಆರ್. ಪ್ರಸಾದ

Spread the love

ಧಾರವಾಡ: ವಿದ್ಯೆಯು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಪ್ರಬಲ ಸಾಧನವಾಗಬೇಕು ಹಾಗೂ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು (ಕ.ವಿ.ವ. ಸಂಘ) ಆಯೋಜಿಸಿದ್ದ ಶ್ರೀಮತಿ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ ದತ್ತಿ ಸಮಾರಂಭದಲ್ಲಿ ‘ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ-೨೦೨೫’ ಪ್ರದಾನ ಮಾಡಿ ಮಾತನಾಡಿದರು.

ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ
ಇಂದಿನ ಸಂಧಿಗ್ದ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಯಾಗಬೇಕು. ಆದರೆ, ದಿನ ಬೆಳಗಾದರೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಇದು ನಾಗರಿಕ ಸಮಾಜಕ್ಕೆ ದೊಡ್ಡ ಕಪ್ಪು ಚುಕ್ಕೆ. ಈ ಸಮಸ್ಯೆಯ ಕುರಿತು ಪುರುಷರು ಸಹ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಲೀಲಾವತಿ ಪ್ರಸಾದ ಆತಂಕ ವ್ಯಕ್ತಪಡಿಸಿದರು.

ಸಮಾಜದ ಅನಿಷ್ಟಗಳ ವಿರುದ್ಧ ನಿರಂತರ ಹೋರಾಟ: ಸುನಂದಾ ಕಡಮೆ
ಹುಬ್ಬಳ್ಳಿಯ ಸಾಹಿತಿ ಶ್ರೀಮತಿ ಸುನಂದಾ ಕಡಮೆ ಅವರು ಅಭಿನಂದನಾ ಮಾತುಗಳನ್ನಾಡಿ, ಪ್ರಶಸ್ತಿ ಪುರಸ್ಕೃತರಾದ ಹಾಸನದ ಸಾಹಿತಿ ರೂಪ ಹಾಸನ್ ಅವರು ‘ಪ್ರೇರಣಾ ವಿಕಾಸ ವೇದಿಕೆ’ಯ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯ, ಅತ್ಯಾಚಾರ, ಅನಾಚರ ಹಾಗೂ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರಿಗೆ ಸಂದ ಪ್ರಶಸ್ತಿ ಮೊತ್ತವನ್ನೇ ವಿನಿಯೋಗಿಸುತ್ತಿದ್ದಾರೆ ಎಂದರು.

ರೂಪ ಹಾಸನ್ ಅವರ ಸಾಹಿತ್ಯದ ಮೇಲೆ ಟಾಲ್‌ಸ್ಟಾಯ್‌ ಅವರ ಪ್ರಭಾವವಿದ್ದು, ಅವರು ಎಸ್.ಆರ್. ಹಿರೇಮಠ ಕುರಿತು ‘ಮಹಾಸಂಗ್ರಾಮಿ’ ಕೃತಿಯನ್ನು ಬರೆದಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಮೊತ್ತ ನೊಂದವರ ವಿದ್ಯಾಭ್ಯಾಸಕ್ಕೆ ವಿನಿಯೋಗ
ಪ್ರಶಸ್ತಿ ಪುರಸ್ಕೃತೆ ರೂಪ ಹಾಸನ್ ಮಾತನಾಡಿ, ನನಗೆ ಸಂದ ಈ ಪ್ರಶಸ್ತಿ ಮೊತ್ತವನ್ನು ಸಮಾಜದಲ್ಲಿ ನೊಂದವರ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೊಲೆಗಡುಕರ ಸಮಾಜ ಸೃಷ್ಟಿಸುತ್ತಿದ್ದೇವೆಯೇ ಎಂಬ ಭಾವನೆ ಉಂಟಾಗುತ್ತಿದೆ. ಈ ಪ್ರಶಸ್ತಿಯು ನನ್ನನ್ನು ಇನ್ನಷ್ಟು ರಚನಾತ್ಮಕ ಕಾರ್ಯ ಮಾಡಲು ಜವಾಬ್ದಾರಿ ನೀಡಿದೆ ಎಂದು ತಿಳಿಸಿದರು.

ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರದ್ಧಾಂಜಲಿ
ಸಮಾರಂಭದ ಪ್ರಾರಂಭದಲ್ಲಿ ಡಾ. ಎಸ್.ಎಲ್. ಭೈರಪ್ಪನವರ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ಡಾ. ವೀಣಾ ಶಾಂತೇಶ್ವರ, ಎಸ್.ಆರ್. ಹಿರೇಮಠ, ಪಾರ್ವತಿ ಹಾಲಭಾವಿ, ಪ್ರಕಾಶ ಕಡಮೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *