ಪಟ್ಟಣಕ್ಕೆ ಕರೆಂಟ್ ಇದೆ, ಉಪ್ಪಾರ್ ಮೂಳೆಗೆ ಯಾಕಿಲ್ಲ? ಚೆಸ್ಕಾಂ ಅಧಿಕಾರಿಗಳಿಗೆ ಸಚಿವರ ತರಾಟೆ
ಕೊಳ್ಳೇಗಾಲ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮದಲ್ಲಿ ವಿದ್ಯುತ್ ಸಮಸ್ಯೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಅವರು ಚೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ರೈತ ಮುಖಂಡ ಹನಗಳ್ಳಿ ಬಸವರಾಜು ನೇತೃತ್ವದ ರೈತರು ಹಲವು ಗ್ರಾಮಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು, ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಸಚಿವರು ಚೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ವಿಫಲರಾದರು. ಇದರಿಂದ ಸಿಟ್ಟಿಗೆದ್ದ ಸಚಿವರು ಎಇಇಗಳಾದ ಶ್ರೀನಿಧಿ ಮತ್ತು ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಂಬ ನೆಟ್ಟು ಹಣ ಮಾಡುತ್ತಿದ್ದಾರೆ, ಕರೆಂಟ್ ಕೊಡುತ್ತಿಲ್ಲ: ರೈತರ ಆಕ್ರೋಶ
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಹನಗಳ್ಳಿ ಬಸವರಾಜು, ಚೆಸ್ಕಾಂ ಅಧಿಕಾರಿಗಳು ನೂರು ವಿದ್ಯುತ್ ಕಂಬಗಳನ್ನು ನೆಟ್ಟು ಬಿಲ್ ಮಾಡಿಕೊಂಡಿದ್ದಾರೆ. ಆದರೆ ರೈತರು ಪ್ರಶ್ನಿಸಿದಾಗ, ಈಗಾಗಲೇ ಎಳೆದಿದ್ದ ವಿದ್ಯುತ್ ತಂತಿಯನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ಗುತ್ತಿಗೆದಾರ ಅದೇ ಕಂಬಗಳಿಗೆ ಮತ್ತೆ ತಂತಿ ಎಳೆದು ಬಿಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇಂಜಿನಿಯರ್‌ಗಳು ಕಂಬ ನೆಟ್ಟು ಹಣ ಮಾಡುತ್ತಿದ್ದಾರೆಯೇ ಹೊರತು, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದಿರುವುದಕ್ಕೆ ಕಾರಣವೇನು?
ಪಾಳ್ಯ ಗ್ರಾಮದ ಆರ್‌ಟಿಐ ಕಾರ್ಯಕರ್ತ ರಂಗಸ್ವಾಮಿ ಅವರು ಆರು ಅರ್ಜಿಗಳನ್ನು ಸಲ್ಲಿಸಿ, ಇಕ್ಕಡಹಳ್ಳಿ, ಪಾಳ್ಯ, ದನಿಗೆರೆ, ಲಿಂಗನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರಿದರು. ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ. ಒತ್ತುವರಿ ತೆರವುಗೊಳಿಸದಿರಲು ಕಾರಣವೇನು ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಗುಂಡಾಲ್ ಜಲಾಶಯದ ನೀರು ರೈತರಿಗೆ ಸಿಗುತ್ತಿಲ್ಲ
ಗುಂಡಾಲ್ ಜಲಾಶಯ ಅಚ್ಚುಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ದಸರತ ಮಾತನಾಡಿ, ಜಲಾಶಯದಿಂದ ಸುಮಾರು ಐದು ಸಾವಿರ ಎಕರೆ ಜಮೀನಿಗೆ ನೀರು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಜಲಾಶಯದ ಚಾನಲ್‌ಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಪಟ್ಟಣದ ಸರ್ಕಾರಿ ಕಚೇರಿಗಳ ಆಸ್ತಿಯನ್ನು ಆರ್‌ಟಿಸಿಯಲ್ಲಿ ದಾಖಲಿಸಿದ್ದರೂ, ಅಧಿಕಾರಿಗಳು ತಮ್ಮ ಕಚೇರಿಗಳ ಆಸ್ತಿ ರಕ್ಷಿಸಿಕೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.
ಕಾರ್ಯಕ್ರಮಕ್ಕೆ ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳ ಅರ್ಜಿಗಳನ್ನು ಹಿಡಿದು ಗುಂಪು ಗುಂಪಾಗಿ ಆಗಮಿಸಿದ್ದರು. 150ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಶಾಸಕರು ಹಾಗೂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಸಿದರು.