ಹಿರೇಹರಕುಣಿ ರೈತನಿಗೆ ಕಣ್ಣೀರು ತರಿಸಿದ ದುಷ್ಕರ್ಮಿಗಳು: ಅಂದಾಜು ₹50,000 ಮೌಲ್ಯದ ಬಾಳೆ ಬೆಳೆ ನಾಶ

Spread the love

ಕುಂದಗೋಳ: ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ದುಷ್ಕರ್ಮಿಗಳು ರೈತನೊಬ್ಬನ ಹೊಲಕ್ಕೆ ನುಗ್ಗಿ, ಅಂದಾಜು 50 ಸಾವಿರ ರೂಪಾಯಿ ಮೌಲ್ಯದ ಬಾಳೆ ಗಿಡಗಳನ್ನು ನಾಶಪಡಿಸಿದ ವಿಕೃತಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ರೈತ ಕಣ್ಣೀರು ಸುರಿಸುವಂತಾಗಿದೆ.

ಗ್ರಾಮದ ರೈತ ಪ್ರಕಾಶ್ ಜಗದೇನವರ ಅವರ ಸರ್ವೇ ನಂಬರ್ 5ರಲ್ಲಿರುವ ಮೂರು ಎಕರೆ ಜಮೀನಿನಲ್ಲಿ ಈ ದುಷ್ಕೃತ್ಯ ನಡೆದಿದೆ. ಪ್ರತಿದಿನದಂತೆ ಬೆಳಿಗ್ಗೆ ತೋಟಕ್ಕೆ ಹೋದ ಪ್ರಕಾಶ್, ತಮ್ಮ ಮಕ್ಕಳಂತೆ ಹಗಲು ರಾತ್ರಿ ಬೆಳೆಸಿದ್ದ ಬಾಳೆ ಗಿಡಗಳು ನಾಶವಾಗಿರುವುದನ್ನು ಕಂಡು ದಿಕ್ಕು ತೋಚದಂತಾಗಿ ಜಮೀನಿನಲ್ಲೇ ಕುಳಿತು ಮಮ್ಮಲ ಮರುಗಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬಾಳೆ ಫಸಲು ಕೈ ಸೇರುವ ಹೊತ್ತಿನಲ್ಲಿ ಇಂತಹ ದುರ್ಘಟನೆ ನಡೆದಿರುವುದು ರೈತನಿಗೆ ಆಘಾತ ತಂದಿದೆ. ಹಬ್ಬದ ಸೀಸನ್ ಆಗಿರುವುದರಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಪ್ರಕಾಶ್, ಏಕಾಏಕಿ ನಷ್ಟ ಅನುಭವಿಸಿದ್ದಾರೆ. ಹೊಟ್ಟೆಕಿಚ್ಚು ಅಥವಾ ದ್ವೇಷದಿಂದ ಯಾರಾದರೂ ಈ ರೀತಿ ಮಾಡಿರಬಹುದೆಂದು ಶಂಕಿಸಲಾಗಿದೆ.

ಈ ವಿಕೃತಿ ಎಸಗಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ನೋವಿನಲ್ಲಿರುವ ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಘಟನೆ ಕುಂದಗೋಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Leave a Reply

Your email address will not be published. Required fields are marked *