ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು ಕಾಂಗ್ರೆಸ್ ಕಿಸಾನ್ ಘಟಕದ ಆಗ್ರಹ

Spread the love

ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು – ಕಿಸಾನ್ ಘಟಕದ ಆಗ್ರಹ

ಧಾರವಾಡ: ಮುಂಬರುವ ಹಿಂಗಾರು ಹಂಗಾಮಿಗೆ ಕಡಲೆ ಬೀಜಗಳ ವಿತರಣೆಯನ್ನು ಪ್ರಸ್ತುತ ನೀಡುತ್ತಿರುವ ಮೂರು ಪ್ಯಾಕೆಟ್‌ಗಳಿಂದ ಐದು ಪ್ಯಾಕೆಟ್‌ಗಳಿಗೆ ಏರಿಸಬೇಕು ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ (ಕಿಸಾನ್ ಘಟಕ) ತೀವ್ರವಾಗಿ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ರೈತ ಸಂಪರ್ಕ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘಟಕ ಎಚ್ಚರಿಕೆ ನೀಡಿದೆ.

​ಈ ಕುರಿತು ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ರಮೇಶ ಮ. ಕೊಪ್ಪದ ಹಾಗೂ ಕಾಂಗ್ರೆಸ್‌ ಪಕ್ಷದ ಮುಂಖಡರು ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಬುಧವಾರದಂದು ಮನವಿ ಸಲ್ಲಿಸಿದ್ದಾರೆ.

​ರೈತರಿಗೆ 3 ಪ್ಯಾಕೆಟ್ ಬೀಜ ಸಾಲುತ್ತಿಲ್ಲ

​”ಕುಂದಗೋಳ ತಾಲೂಕಿನಲ್ಲಿ ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ತಯಾರಾಗುತ್ತಿದ್ದಾರೆ. ಆದರೆ, ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಒಂದು ಖಾತೆಗೆ ಕೇವಲ 3 ಪ್ಯಾಕೆಟ್ ಕಡಲೆ ಬೀಜವನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆ. ಈ ಪ್ರಮಾಣವು ರೈತರಿಗೆ ಸಾಕಾಗುತ್ತಿಲ್ಲ” ಎಂದು ರಮೇಶ್ ಕೊಪ್ಪದ ಅವರು ಮನವಿಯಲ್ಲಿ ತಿಳಿಸಿದ್ದಾರೆ.

​ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಶೇಕಡಾ 70ರಷ್ಟು ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದರಿಂದ ಬಹುತೇಕ ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆ ಮಾಡಲು ತಯಾರ ನಡೆಸಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ಸಮರ್ಪಕವಾಗಿ ಕಡಲೆ ಬೀಜ ಪೂರೈಕೆಯಾಗುತ್ತಿಲ್ಲ ಎಂದು ಅವರು ಸೂಚಿಸಿದ್ದಾರೆ.

​ಕೂಡಲೇ ವಿತರಣಾ ಪ್ರಮಾಣ ಏರಿಸಿ: ಕಿಸಾನ್ ಘಟಕ

​ಮಾನ್ಯ ಜಂಟಿ ನಿರ್ದೇಶಕರು ರೈತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಬೇಕು. ಸದ್ಯದ ಬಿತ್ತನೆಯ ಸಮಯ ಆರಂಭವಾಗಿದ್ದು, ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳು ಕುಂದಗೋಳ ಸೇರಿದಂತೆ ವಿವಿಧ ತಾಲೂಕುಗಳ ಸಹಾಯಕ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿ, ಪ್ರತಿ ರೈತರಿಗೆ 5 ಪ್ಯಾಕೇಟ್ ಕಡಲೆ ಬೀಜ ವಿತರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕಿಸಾನ್ ಘಟಕ ಒತ್ತಾಯಿಸಿದೆ.

​ಒಂದು ವೇಳೆ ವಿತರಣಾ ಪ್ರಮಾಣವನ್ನು ಹೆಚ್ಚಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಆಯಾ ರೈತ ಸಂಪರ್ಕ ಕೇಂದ್ರಗಳ ಕಚೇರಿಗಳ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಮೇಶ ಕೊಪ್ಪದ ಅವರು ಎಚ್ಚರಿಕೆ ನೀಡಿದ್ದಾರೆ.

​ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾದ ಶಿವಾನಂದ ಬೆಂತೂರ, ಜಗದೀಶ ಉಪ್ಪಿನ, ದೃತಿ ಸಾಲ್ಮನಿ, ಮಲ್ಲೇಶ ಬೆಳವಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *