ಕಡಬ: ಸವಣೂರು ಪರಿಸರದಲ್ಲಿ ಭೀಕರ ಗಾಳಿ; ಅಡಿಕೆ ತೋಟ, ವಿದ್ಯುತ್ ಕಂಬ, ಮನೆಗಳಿಗೆ ಹಾನಿ

Spread the love

ಕಡಬ: ತಾಲೂಕಿನ ಸವಣೂರು ಪರಿಸರದಲ್ಲಿ ಆಗಸ್ಟ್ 19ರಂದು ಮುಂಜಾನೆ 5 ಗಂಟೆಗೆ ಬೀಸಿದ ಭೀಕರ ಗಾಳಿ ಮತ್ತು ಮಳೆಯಿಂದಾಗಿ ಅಂದಾಜು ಲಕ್ಷಾಂತರ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ.

ಗಾಳಿಯ ರಭಸಕ್ಕೆ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸವಣೂರು ಮೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿರುವ ಕೆಡೆಂಜಿ, ಆರೇಡಿ, ಕುದ್ಮನಮಜಲು, ಪಟ್ಟೆಮಡಕೆ ಮತ್ತು ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಈ ಘಟನೆ ನಡೆದಿದೆ.

ಇದರಿಂದಾಗಿ ಈ ಪ್ರದೇಶಗಳ ಹಲವು ಮನೆಗಳಿಗೆ ಹಾನಿಯಾಗಿದ್ದು, ಅಡಿಕೆ ಮತ್ತು ತೆಂಗಿನ ತೋಟಗಳಿಗೂ ಭಾರಿ ನಷ್ಟ ಉಂಟಾಗಿದೆ. ಅಲ್ಲದೆ, ಆರೇಲ್ತಡಿ ಕೊರಗಜ್ಜನ ಕಟ್ಟೆ ಮತ್ತು ದೈವಸ್ಥಾನದ ಪ್ರದೇಶಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ಹಾನಿಯ ಪ್ರಮಾಣವನ್ನು ಅಂದಾಜಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಮೆಸ್ಕಾಂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಹಾನಿಯ ಪ್ರಮಾಣ ಹೆಚ್ಚಿರುವುದರಿಂದ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಸರಿಪಡಿಸಲು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಗಾಳಿ ಮತ್ತು ಮಳೆಯಿಂದಾಗಿ ನಷ್ಟಕ್ಕೊಳಗಾದ ಸ್ಥಳೀಯರು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *