
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಈ ಸಮೀಕ್ಷೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರತಿ ಕುಟುಂಬದಿಂದ ಸುಮಾರು 60 ಪ್ರಶ್ನೆಗಳಿಗೆ ಉತ್ತರಗಳನ್ನು ಸಂಗ್ರಹಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ಪ್ರಮುಖವಾಗಿ ಕೇಳಲಾಗುವ ಪ್ರಶ್ನೆಗಳು
ಈ ಸಮೀಕ್ಷೆಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ತಂದೆ-ತಾಯಿ ಹೆಸರು, ಮನೆ ವಿಳಾಸ, ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್, ಆಧಾರ್, ಮತದಾರರ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಸದಸ್ಯರ ಸಂಖ್ಯೆ, ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಉದ್ಯೋಗ, ಆದಾಯ, ಆಸ್ತಿ ವಿವರ, ವಸತಿ, ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ 60ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೆ, ಸಬ್ಸಿಡಿ, ಮೀಸಲಾತಿ, ಪಿಂಚಣಿ, ಆರೋಗ್ಯ ಯೋಜನೆಗಳಂತಹ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಕ್ರೈಸ್ತ ಜಾತಿಗಳಿಗೆ ‘ಕೊಕ್’: 33 ಜಾತಿಗಳು ಪಟ್ಟಿಯಿಂದ ಹೊರಕ್ಕೆ
ಜಾತಿಗಣತಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ಹಿಂದೂ ಮೂಲದ ಜಾತಿಗಳನ್ನು ಉಲ್ಲೇಖಿಸಿದ್ದ 33 ಜಾತಿಗಳ ಹೆಸರನ್ನು ಆಯೋಗ ಕೈಬಿಟ್ಟಿದೆ. ಈ ಕುರಿತು ಇ-ಆಡಳಿತ ಇಲಾಖೆಗೆ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದ್ದು, ಸಮೀಕ್ಷೆ ನಡೆಸುವ ಆ್ಯಪ್‌ನಿಂದ ಈ ಜಾತಿಗಳನ್ನು ತೆಗೆದುಹಾಕಲಾಗಿದೆ.
ಈ ಕ್ರಮದಿಂದಾಗಿ ಸಮೀಕ್ಷೆ ಕುರಿತಿದ್ದ ಪ್ರಮುಖ ವಿರೋಧಗಳಲ್ಲಿ ಒಂದನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದಂತಾಗಿದೆ.
ಆದಾಗ್ಯೂ, ಜನರು ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ ಎಂದು ಬರೆಯಿಸಿಕೊಳ್ಳಲು ಅವಕಾಶವಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಜಾತಿಗಳನ್ನು ಕೇವಲ ‘ಡ್ರಾಪ್ ಔಟ್’ ಪಟ್ಟಿಯಿಂದ ತೆಗೆಯಲಾಗಿದೆಯೇ ಹೊರತು, ಬರೆಯಲು ಇಚ್ಛಿಸುವವರಿಗೆ ಯಾವುದೇ ನಿರ್ಬಂಧವಿಲ್ಲ. ಇದೇ ರೀತಿ, ಬ್ರಾಹ್ಮಣ ಮುಸ್ಲಿಂ ಮತ್ತು ಜೈನ್ ಸಮುದಾಯದಂತಹ ಇತರ ಮಿಶ್ರ ಜಾತಿಗಳನ್ನು ಮುಂದುವರಿಸಲಾಗಿದ್ದು, ಈ ಸಂಬಂಧ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ಮಧುಸೂದನ್ ನಾಯಕ್ ಹೇಳಿದ್ದಾರೆ. ಆದರೆ, ಆ್ಯಪ್‌ನಲ್ಲಿ ಆಕ್ಷೇಪಾರ್ಹ ಜಾತಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

