
ಹೊಸದಿಲ್ಲಿ: ಸಿ.ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಧಾಕೃಷ್ಣನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್ ಮತ್ತು ಎಂ. ವೆಂಕಯ್ಯ ನಾಯ್ಡು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
67 ವರ್ಷದ ರಾಧಾಕೃಷ್ಣನ್ ಅವರು ತಮಿಳುನಾಡಿನ ಹಿರಿಯ ಬಿಜೆಪಿ ನಾಯಕರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಜೊತೆ ಗಾಢ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರು 452 ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದರು. ಅವರ ಎದುರಾಳಿಯಾಗಿದ್ದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದಿದ್ದರು.
ರಾಧಾಕೃಷ್ಣನ್ ಈ ಹಿಂದೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯ ಹೆಚ್ಚುವರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಜುಲೈ 21ರಂದು ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಚುನಾವಣೆ ಅನಿವಾರ್ಯ ವಾಗಿ. ಅದರಂತೆ ಚುನಾವಣಾ ಪ್ರಕ್ರಿಯೆ ಮುಗಿದು ಇವರು ಆಯ್ಕೆಯಾದರು.

