

ಕೊಪ್ಪಳ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ಬಿಜೆಪಿ-ಜೆಡಿಎಸ್ ಒತ್ತಾಯ; ರಾಜ್ಯಪಾಲರಿಗೆ ಮನವಿ
ಬೆಂಗಳೂರು: ಕೊಪ್ಪಳದಲ್ಲಿ ನಡೆದ ಗವಿಸಿದ್ದಪ್ಪ ನಾಯಕ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಈ ಸಮಯದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಕೊಲೆಯಾದ ಗವಿಸಿದ್ದಪ್ಪ ನಾಯಕ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, 2 ಎಕರೆ ಜಮೀನು ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಈ ಹತ್ಯೆ ಒಂದು ಗಂಭೀರ ವಿಚಾರವಾಗಿದ್ದು, ಇಡೀ ರಾಜ್ಯ ಹಾಗೂ ದೇಶದಲ್ಲಿ ಸುದ್ದಿಯಾಗಿದೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಇಂತಹ ಕೊಲೆಗಳನ್ನು ಮಾಡುವವರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಪರೀತ ವಿಶ್ವಾಸವಿದೆ. ಇದರಿಂದಾಗಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಅವರು ಟೀಕಿಸಿದರು. ಸತ್ತವರು ಯಾವುದೇ ಪಕ್ಷದ ಕಾರ್ಯಕರ್ತರಾಗಿರಲಿ, ಇಂತಹ ಘಟನೆಗಳನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಸಂತ್ರಸ್ತ ಕುಟುಂಬವನ್ನು ಮಾಜಿ ಸಚಿವ ಶ್ರೀರಾಮುಲು, ರಾಜು ಗೌಡ, ಶಿವನಗೌಡ ನಾಯಕ ಹಾಗೂ ಜನಾರ್ದನ ರೆಡ್ಡಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಸ್ಮಾರ್ಟ್ ಮೀಟರ್ ಬಗ್ಗೆ ಪ್ರಸ್ತಾಪ ಈ ಭೇಟಿಯ ವೇಳೆ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವನ್ನೂ ನಿಯೋಗ ಪ್ರಸ್ತಾಪಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಲೂಟಿ ಮತ್ತು ಕೊಳ್ಳೆ ಹೊಡೆಯುವ ಕೆಲಸಗಳು ನಡೆಯುತ್ತಿವೆ ಎಂದು ವಿಜಯೇಂದ್ರ ಆರೋಪಿಸಿದರು. ಈ ಹಿಂದೆ ವಿಪಕ್ಷ ನಾಯಕರು ಮತ್ತು ಡಾ. ಅಶ್ವತ್ಥನಾರಾಯಣ ಅವರು ಸಚಿವರ ವಿರುದ್ಧ ಪ್ರಾಸಿಕ್ಯೂಶನ್ಗೆ ಅನುಮತಿ ಕೋರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಇಂದು ಕೂಡ ಮತ್ತೊಮ್ಮೆ ಆ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಗ್ಯಾರಂಟಿ ಸರ್ಕಾರ ಬಂದ ನಂತರ ಹಿಂದೂಪರ ಕಾರ್ಯಕರ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಟೀಕಿಸಿದರು. ಈ ಹತ್ಯೆಯ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ಹೊಣೆಗಾರರು. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಗೃಹ ಸಚಿವರು ಇಂತಹ ಪ್ರಕರಣಗಳ ಬಗ್ಗೆ ‘ನನಗೆ ಗೊತ್ತಿಲ್ಲ, ಮಾಹಿತಿ ಇಲ್ಲ’ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈ ಸರ್ಕಾರ ನಮ್ಮ ಭಾಗದಲ್ಲಿ ದ್ವೇಷ ಹೆಚ್ಚಿಸುತ್ತಿದೆ. ಗವಿಸಿದ್ದಪ್ಪ ನಾಯಕರ ತಂದೆ ಹೇಳಿದಂತೆ, ಒಂದು ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಮಸೀದಿ ಬಳಿ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ 8-10 ಜನರು ಭಾಗಿಯಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಸರ್ಕಾರ ಮತ್ತು ಶಾಸಕರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಶ್ರೀರಾಮುಲು ಹೇಳಿದರು. ಕೊಲೆಗಡುಕರಿಗೆ ಗಲ್ಲುಶಿಕ್ಷೆಯಾಗಬೇಕು ಎಂದೂ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ-ಜೆಡಿಎಸ್ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಸೇರಿದಂತೆ ಇತರರು ಇದ್ದರು.

