

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಯು ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು (500 ಕೋಟಿಗೂ ಹೆಚ್ಚು) ಪ್ರಯಾಣಿಸಿ ಈ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ. ಇದು ರಾಜ್ಯಕ್ಕೆ ಮತ್ತು ಸಾರಿಗೆ ಇಲಾಖೆಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಯೋಜನೆಯ ಯಶಸ್ಸು ಮತ್ತು ಮಹತ್ವ:
ಶಕ್ತಿ ಯೋಜನೆಯು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಯೋಜನೆ ಮಹಿಳೆಯರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ. “Beyond Free Rides – Do Sustainable Mobility Network” ಸಂಸ್ಥೆಯ ವರದಿಯ ಪ್ರಕಾರ, ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದು ರಾಜ್ಯದ ತಲಾ ಆದಾಯ ಹೆಚ್ಚಳಕ್ಕೂ ಕಾರಣವಾಗಿದೆ.
ಸವಾಲುಗಳನ್ನು ಮೆಟ್ಟಿ ನಿಂತ ಸಾಧನೆ
ಸಾರಿಗೆ ಸಂಸ್ಥೆಗಳು ಕಳೆದ ಐದಾರು ವರ್ಷಗಳಿಂದ ಹೊಸ ಬಸ್‌ಗಳ ಸೇರ್ಪಡೆ, ಹೊಸ ನೇಮಕಾತಿ ಇಲ್ಲದೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿದ್ದವು. ಇಂತಹ ಸವಾಲಿನ ಸಂದರ್ಭದಲ್ಲಿಯೂ ತಂಡವಾಗಿ ಕಾರ್ಯನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಿರುವುದು ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಯೋಜನೆ ಪ್ರಾರಂಭವಾದ ನಂತರ 5800 ಹೊಸ ಬಸ್‌ಗಳ ಸೇರ್ಪಡೆ, 10,000 ಹೊಸ ನೇಮಕಾತಿ ಮತ್ತು ಸರ್ಕಾರದಿಂದ 2000 ಕೋಟಿ ರೂಪಾಯಿಗಳ ಆರ್ಥಿಕ ಸಹಾಯ ದೊರೆತಿದೆ. ಈ ಎಲ್ಲ ಬದಲಾವಣೆಗಳಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಗೌರವ ಸಮರ್ಪಣೆ
ಈ ಚಾರಿತ್ರಿಕ ಸಾಧನೆಗಾಗಿ ಸಚಿವರು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ, ಅಧ್ಯಕ್ಷರು, ಅಧಿಕಾರಿಗಳು, ಹಾಗೂ ಸಮಸ್ತ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಪರಿಶ್ರಮ, ಕಾರ್ಯತತ್ಪರತೆ ಮತ್ತು ಪ್ರಾಮಾಣಿಕ ಸೇವೆ ಅನನ್ಯ ಎಂದು ಪ್ರಶಂಸಿಸಿದ್ದಾರೆ. ಕಾರ್ಮಿಕ ಮುಖಂಡರ ಸಹಕಾರವನ್ನು ಸ್ಮರಿಸಿದ ಸಚಿವರು, ಯೋಜನೆಗೆ ಬೆಂಬಲ ನೀಡಿದ ಮಾಧ್ಯಮದವರಿಗೂ ಧನ್ಯವಾದ ತಿಳಿಸಿದ್ದಾರೆ.
ಇಂದು ಶಕ್ತಿ ಯೋಜನೆಯ ಯಶಸ್ಸು ಇಡೀ ದೇಶಕ್ಕೆ ಮಾದರಿಯಾಗಿದೆ. ವಿವಿಧ ರಾಜ್ಯಗಳು ಇದನ್ನು ಬೇರೆ ಬೇರೆ ಹೆಸರುಗಳಲ್ಲಿ ಮತ್ತು ರೂಪಾಂತರಗಳೊಂದಿಗೆ ಜಾರಿಗೆ ತರುತ್ತಿರುವುದು ನಮ್ಮ ಸರ್ಕಾರದ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಚಿವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

