
ಹನೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ಪಡಗೂರು ಗ್ರಾಮದ ಬಳಿ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ವರ್ಷದ ಹೆಣ್ಣು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಪಡಗೂರು ವ್ಯಾಪ್ತಿಯಲ್ಲಿ ಹುಲಿ ಸಂಚರಿಸುತ್ತಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಅದರ ಚಲನವಲನ ಗಮನಿಸಲು ಥರ್ಮಲ್ ಡ್ರೋನ್ ಬಳಸಿದಾಗ ಖಾಸಗಿ ಜಮೀನೊಂದರಲ್ಲಿ ಹುಲಿ ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ, ಸೆಸ್ಕಾಂ ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೇರಳ ಮೂಲದ ರವಿಚಂದ್ರ ಎಂಬುವವರಿಗೆ ಸೇರಿದ ಈ ಜಮೀನನ್ನು ಪರಮೇಶ ಎಂಬುವವರು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದರು. ಕಾಡುಹಂದಿಗಳ ಹಾವಳಿ ತಡೆಗಟ್ಟಲು ಜಮೀನಿನ ಸುತ್ತಲಿನ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಭಾನುವಾರ ರಾತ್ರಿ ಆಹಾರ ಹುಡುಕುತ್ತಾ ಬಂದ ಹುಲಿ, ಈ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ತಿಳಿಯುತ್ತಿದ್ದಂತೆ ಜಮೀನಿನ ಮಾಲೀಕ ರವಿಚಂದ್ರ ಹಾಗೂ ಗುತ್ತಿಗೆದಾರ ಪರಮೇಶ ತಲೆಮರೆಸಿಕೊಂಡಿದ್ದು, ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ. ಪ್ರಕರಣದ ತನಿಖಾ ವರದಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಹಾಗೂ ಆರೋಪಿಗಳು ಪತ್ತೆಯಾದ ಕೂಡಲೇ ಅವರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಇಲಾಖೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸುರೇಶ್ ಹಾಗೂ ಪಿಎಸ್ಐ ಸ್ನೇಹರಾಜು ಭೇಟಿ ನೀಡಿ ಅಕ್ರಮ ವಿದ್ಯುತ್ ಸಂಪರ್ಕದ ಕುರಿತು ಪರಿಶೀಲನೆ ನಡೆಸಿದರು. ಕಾಡುಪ್ರಾಣಿಗಳ ರಕ್ಷಣೆಯಲ್ಲಿ ಇಲಾಖೆಯ ವಿಫಲತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ವರದಿ: ಕಾರ್ತಿಕ್ ಗೌಡ, ಹನೂರು

