ಆರ್‌ಎಸ್‌ಎಸ್‌ ಕಚೇರಿಗೆ ಮುತ್ತಿಗೆ ಯತ್ನ: ಯುವ ಕಾಂಗ್ರೆಸ್‌ ಪ್ರತಿಭಟನೆ, ನೂಕುನುಗ್ಗಲು; ಹಲವರು ವಶಕ್ಕೆ

Spread the love

ಆರ್‌ಎಸ್‌ಎಸ್‌ ಕಚೇರಿಗೆ ಮುತ್ತಿಗೆ ಯತ್ನ: ಯುವ ಕಾಂಗ್ರೆಸ್‌ ಪ್ರತಿಭಟನೆ, ನೂಕುನುಗ್ಗಲು; ಹಲವರು ವಶಕ್ಕೆ

ಹುಬ್ಬಳ್ಳಿ:ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಗೋಕುಲ ರಸ್ತೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಾಲಯದ ‘ಕೇಶವ ಪುಂಜ’ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕುನುಗ್ಗಲು ಉಂಟಾಯಿತು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆರ್‌ಎಸ್‌ಎಸ್‌ ಕಚೇರಿಗೆ ತೆರಳುವ ಮಾರ್ಗವನ್ನು ಬಂದ್ ಮಾಡಿದ್ದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್ಜುನ್ ಪಾಟೀಲ್ ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಆರ್‌ಎಸ್‌ಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. “ದೇಶ ದ್ರೋಹಿ ಆರ್‌ಎಸ್‌ಎಸ್‌” ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಕಚೇರಿ ಕಡೆಗೆ ಮುನ್ನುಗ್ಗಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ನೂಕುನುಗ್ಗಲು ನಡೆಯಿತು. ಪೊಲೀಸರು ಮಾರ್ಗ ಮಧ್ಯದಲ್ಲೇ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದರು. ವಶಕ್ಕೆ ಪಡೆದ ಕಾಂಗ್ರೆಸ್‌ ಕಾರ್ಯಕರ್ತರನ್ನು ಗೋಕುಲ ರಸ್ತೆಯಲ್ಲಿರುವ ನ್ಯೂ ಸಿಎಆರ್‌ ಮೈದಾನಕ್ಕೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.

ಈ ಪ್ರತಿಭಟನೆಯಿಂದಾಗಿ ಗೋಕುಲ ರಸ್ತೆಯಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಕಾರಣ ವಾಹನ ಸವಾರರು ಕೆಲಹೊತ್ತು ಪರದಾಡುವ ಪ್ರಸಂಗ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಕಾನೂನು ಸುವ್ಯವಸ್ಥೆಯ ಡಿಸಿಪಿ ಎಂ. ಬಿ. ನಂದಗಾವಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *