ಹೊಸ ನ್ಯಾಯಬೆಲೆ ಅಂಗಡಿಗಳಿಗಾಗಿ ಅರ್ಜಿ ಆಹ್ವಾನಧಾರವಾಡ ಜಿಲ್ಲೆಯಲ್ಲಿ 3 ಹೊಸ ಅಂಗಡಿಗಳಿಗೆ ಅವಕಾಶ – ಆಹಾರ ನಾಗರಿಕ ಸರಬರಾಜು ಇಲಾಖೆಯ ಪ್ರಕಟಣೆ

Spread the love

ಧಾರವಾಡ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ ವ್ಯಾಪ್ತಿಯ ಬೆಂಗೇರಿ–ಗೋಪನಕೊಪ್ಪ, ಕರ್ಕಿ ಬಸವೇಶ್ವರನಗರ ಹಾಗೂ ಆನಂದನಗರ ಪ್ರದೇಶಗಳಲ್ಲಿ ಹೊಸದಾಗಿ ಮೂರು ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಕುರಿತು ಅರ್ಜಿಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಹ್ವಾನಿಸಿದೆ.

ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016ರ ಕಲಂ 11(2) ರನ್ವಯ ಪ್ರತಿ 800 ಪಡಿತರ ಚೀಟಿಗಳಿಗೆ ಒಂದು ಅಂಗಡಿ ಹಂಚಿಕೆಯ ಅನುಪಾತದಲ್ಲಿ ಹೊಸ ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾರ್ಯಾರು ಅರ್ಜಿ ಸಲ್ಲಿಸಬಹುದು:
ರಾಜ್ಯ ಸರ್ಕಾರದ ನಿಗಮಗಳು, ಕಂಪನಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಾಯಿತ ಸಹಕಾರ ಸಂಘಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾನ್ಯತೆ ಪಡೆದ ಸ್ತ್ರೀಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು, ಬೆಂಚ್ಮಾರ್ಕ್ ವಿಕಲಚೇತನರು ಹಾಗೂ ಲಿಂಗ ಅಲ್ಪಸಂಖ್ಯಾತ ವರ್ಗದ ವೈಯಕ್ತಿಕ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಯನ್ನು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಹತ್ತಿರದ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 13, 2025ರ ಸಂಜೆ 5:30ರೊಳಗಾಗಿ ಧಾರವಾಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಡಾ. ವಿನೋದ ಹೆಗ್ಗಳಗಿ, ಹೊಸ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಪಡಿತರ ವಿತರಣೆ ಇನ್ನಷ್ಟು ಸುಗಮವಾಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *