
ಧಾರವಾಡ: ಮಕ್ಕಳಿಗಾಗಿ ವಿಶೇಷವಾಗಿ ಸಾಹಿತ್ಯ ಕೃಷಿ ಮಾಡಿರುವ ಹಿರಿಯ ಸಾಹಿತಿ ಆನಂದ ಪಾಟೀಲ ಅವರು ನಾಡಿನ ಸೃಜನಶೀಲ ಮಕ್ಕಳ ಸಾಹಿತಿ ಎಂದು ‘ಹೊಂಬೆಳಕು ಸಾಂಸ್ಕೃತಿಕ ಸಂಘ’ದ ಅಧ್ಯಕ್ಷ ಸ.ರಾ. ಸುಳಕೂಡೆ ಅವರು ಪ್ರಶಂಸಿಸಿದರು.
ಬೆಂಗಳೂರಿನ ಭಾರತೀಯ ವಿದ್ಯಾ ಭವನ ಮತ್ತು ವಿನಾಯಕ ಗೋಕಾಕ ವಾಙ್ಮಯ ಟ್ರಸ್ಟ್ನಿಂದ 2025ನೇ ಸಾಲಿನ ಪ್ರತಿಷ್ಠಿತ ವಿ.ಕೃ. ಗೋಕಾಕ್ ಪ್ರಶಸ್ತಿ ಪುರಸ್ಕೃತರಾಗಿರುವ ಆನಂದ ಪಾಟೀಲ ಅವರನ್ನು ನಗರದ ಆಝಾದ ಉಪವನದ ಗಾಂಧೀಜಿ ಪ್ರತಿಮೆ ಆವರಣದಲ್ಲಿ ಸನ್ಮಾನಿಸಿ ಮಾತನಾಡಿದ ಸುಳಕೂಡೆ, “ಪಾಟೀಲರು ತಮ್ಮ ಮುಗ್ಧತೆ, ಕ್ರಿಯಾಶೀಲತೆ ಮತ್ತು ಶಿಸ್ತುಬದ್ಧ ಬದುಕಿನ ಮೂಲಕ ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಆಕಾಶವಾಣಿಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.
ಬಾಲ್ಯದ ಅನುಭವದಿಂದ ಸಾಹಿತ್ಯ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ ಪಾಟೀಲ, “ಮಕ್ಕಳ ಸಾಹಿತ್ಯವನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಅದನ್ನು ಗಂಭೀರವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಬಾಲ್ಯದ ಅನುಭವಗಳು ಬರಹದ ಮೂಲಕ ಮಕ್ಕಳಿಗೆ ಪ್ರೇರಣೆಯಾದಾಗ ಮಾತ್ರ ಸಾಹಿತ್ಯ ಕೃಷಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, “ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ಪಡೆದ ಆನಂದ ಪಾಟೀಲರ ಉತ್ಕೃಷ್ಟ ವಿಚಾರಧಾರೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಮಕ್ಕಳ ಸಾಹಿತ್ಯ ರಚನೆಯ ಜೊತೆಗೆ ಅಂತರ್ಜಾಲ ಪತ್ರಿಕೆಯನ್ನೂ ಹೊರತರುತ್ತಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಶಿಕ್ಷಣ ತಜ್ಞ ಅಶೋಕ ಉಳ್ಳೇಗಡ್ಡಿ ಮಾತನಾಡಿ, “ನವಲಗುಂದದಲ್ಲಿ ಜನಿಸಿದ ಆನಂದ ಪಾಟೀಲರು ‘ಜನಪದ ಕಲೆಗಳು ಮತ್ತು ವಿಧಿಕ್ರಿಯೆ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವುದು ಅವರ ಅಪಾರ ಅಧ್ಯಯನ ಶೀಲತೆಗೆ ಉದಾಹರಣೆ” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಮಾತನಾಡಿ, “ಅಜ್ಜೀ ಮನೆ ಬಹಳ ದೂರ”, “ಹೂ”, “ಹಕ್ಕಿ ಪುಟಾಣಿ”, “ಬೆಳದಿಂಗಳು”, “ಹತ್ತು ಹತ್ತು ಇಪ್ಪತ್ತು”, “ಮತ್ತೆ ಬಂತು ಚಂಪು”, “ಪುಟ್ಟಕ್ಕನ ಪತ್ರಗಳು”, “ಅಲರು” ಮತ್ತು “ಖಾಲಿ ಕಡ್ಡಿ ಪೆಟ್ಟಿಗೆ” ಮುಂತಾದ ಕವನ ಸಂಕಲನಗಳು, ಕಥೆ, ಕಾದಂಬರಿ, ಕಥನ ಕಾವ್ಯ, ನಾಟಕ ಹಾಗೂ ಹಾಸ್ಯ ಬರಹಗಳ ಮೂಲಕ ಪಾಟೀಲರು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

