
ಬೆಂಗಳೂರ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಹಾರ ಸೇವಿಸಿ ಚರ್ಚೆ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದೊಳಗೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪಕ್ಷದ ವರಿಷ್ಠರ ಸೂಚನೆ ಮತ್ತು ತೀರ್ಮಾನದಂತೆ ತಾವು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ನಡೆದುಕೊಳ್ಳಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ಸರ್ಕಾರದ ವಿರುದ್ಧ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಧಿವೇಶನ ಇರುವ ಹಿನ್ನೆಲೆಯಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ನೋಡಿಕೊಳ್ಳಲು ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಈಗಾಗಲೀ, ಮುಂದೆಯೂ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು. ತಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲಾಗುವುದು ಎಂದರು. ಮುಖ್ಯಮಂತ್ರಿಗಳ ಪ್ರಕಾರ, ಈ ಗೊಂದಲಗಳು ಸೃಷ್ಟಿಯಾಗಿರುವುದು ಕೆಲವು ಮಾಧ್ಯಮಗಳಿಂದ ಮಾತ್ರ.
ಇದೇ ವೇಳೆ, ಕೆಲವು ಶಾಸಕರು ಸಚಿವ ಸಂಪುಟ ಪುನರ್‌ರಚನೆ ಸಂಬಂಧ ದೆಹಲಿಗೆ ಭೇಟಿ ನೀಡಿರಬಹುದು. ಹಾಗೆಂದು ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ವೈಯಕ್ತಿಕ ಕಾರಣಗಳನ್ನು ನೀಡಿ ತಮಗೆ ದೆಹಲಿ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.
ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಡಿ.ಕೆ. ಶಿವಕುಮಾರ್ ಮತ್ತು ತಾವು ಇಂದು ತಮ್ಮ ನಿವಾಸದಲ್ಲಿ ಒಟ್ಟಿಗೆ ಉಪಹಾರ ಸೇವಿಸಿ, ಇತ್ತೀಚಿನ ಅನಗತ್ಯ ಗೊಂದಲಗಳ ಬಗ್ಗೆ ಚರ್ಚಿಸಿದ್ದೇವೆ. ಮುಖ್ಯವಾಗಿ 2028ರ ಸಾರ್ವತ್ರಿಕ ಚುನಾವಣೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳಾದ ಕಾರ್ಪೊರೇಷನ್, ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳ ಮಹತ್ವದ ಬಗ್ಗೆ ಗಮನಹರಿಸಿದ್ದೇವೆ. 2028ರಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ ಮುಂದೆಯೂ ಒಟ್ಟಿಗೆ ಸಾಗುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ವಿರೋಧ ಪಕ್ಷಗಳಿಗೆ ತಿರುಗೇಟು:
ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಈಗಲೂ ಇಲ್ಲ ಮತ್ತು ಮುಂದೆಯೂ ಇರುವುದಿಲ್ಲ ಎಂದು ಒತ್ತಿ ಹೇಳಿದರು. ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರನ್ನು ಸಮರ್ಥವಾಗಿ ಎದುರಿಸಲು ಸಿದ್ಧರಿದ್ದೇವೆ. ಅಪಪ್ರಚಾರ, ಸುಳ್ಳು ಆರೋಪ ಮತ್ತು ಅಪವಾದಗಳನ್ನು ಮಾಡುವುದು ಬಿಜೆಪಿ ಮತ್ತು ಜೆಡಿಎಸ್‌ನ ಚಾಳಿಯಾಗಿದೆ. ಈ ಎರಡೂ ಪಕ್ಷಗಳನ್ನು ತಾವೂ ಮತ್ತು ಉಪಮುಖ್ಯಮಂತ್ರಿಗಳು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾಧ್ಯಮಗಳಲ್ಲಿ ಸೃಷ್ಟಿಯಾದ ಗೊಂದಲಗಳೇ ಇದಕ್ಕೆ ಕಾರಣ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪತ್ರಿಕೆಗಳಲ್ಲಿ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳುವ ಹೇಳಿಕೆ ನೀಡಿವೆ. ಆದರೆ, ಇದು ಅಸಂಭವದ ಪ್ರಯತ್ನ. ಕಾಂಗ್ರೆಸ್ 142 ಶಾಸಕರ ಬಲ ಹೊಂದಿದ್ದು, ವಿರೋಧ ಪಕ್ಷಗಳಾದ ಬಿಜೆಪಿ 64 ಮತ್ತು ಜೆಡಿಎಸ್ 18 ಸೇರಿ ಕೇವಲ 82 ಶಾಸಕರಿದ್ದಾರೆ. ಇದು ವಿಫಲ ಪ್ರಯತ್ನವೆಂದು ಭಾವಿಸಿದ್ದು, ವಿರೋಧ ಪಕ್ಷಗಳು ಏನೇ ಸುಳ್ಳು ಆರೋಪಗಳನ್ನು ಮಾಡಿದರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

