ಕೃಷಿಕ ಸಮಾಜ ಕಟ್ಟಡಕ್ಕೆ ಶಾಸಕರ ಅನುದಾನದಿಂದ 10 ಲಕ್ಷ ರೂ. ಹೆಚ್ಚುವರಿ ನೆರವು: ಎನ್. ಎಚ್. ಕೋನರಡ್ಡಿ

Spread the love

ನವಲಗುಂದ: ಕೃಷಿಕ ಸಮಾಜದ ಕಟ್ಟಡ ನಿವೇಶನ ಖರೀದಿಗೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕು ಘಟಕಗಳಿಗೆ ಕೃಷಿಕ ಸಮಾಜದಿಂದ ಒಟ್ಟು 20 ಲಕ್ಷ ರೂ.ಗಳನ್ನು ನೀಡಲಾಗಿದೆ. ನಿವೇಶನ ಖರೀದಿಗೆ ಹಣದ ಕೊರತೆ ಆಗುತ್ತಿದ್ದರೂ, ಶಾಸಕರ ಅನುದಾನದಿಂದ ಹೆಚ್ಚುವರಿಯಾಗಿ 10 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಪ್ರಕಟಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಘಟಕಗಳಿಗೆ ನಿವೇಶನ ತೆಗೆದುಕೊಳ್ಳಲು 20 ಲಕ್ಷ ರೂಪಾಯಿಗಳ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣದ ಗುರಿ
ಮೂರು ತಿಂಗಳಲ್ಲಿ ಜಾಗ ಖರೀದಿ ಮಾಡಿ, ನಂತರದ ಒಂದು ವರ್ಷದ ಒಳಗಾಗಿ ಬಂಡಾಯದ ನಾಡಿನಲ್ಲಿ ರೈತರ ಬಹುದಿನದ ಭವ್ಯ ಕನಸಿನ ಕಟ್ಟಡ ನಿರ್ಮಿಸುವುದು ನನ್ನ ಜವಾಬ್ದಾರಿ. ಆದರೆ, ತಾವೆಲ್ಲರೂ ಅದಕ್ಕೆ ಕೈಜೋಡಿಸಬೇಕು. ನಮ್ಮ ತಾಲ್ಲೂಕುಗಳ ಕೃಷಿಕ ಸಮಾಜಕ್ಕೆ ಹಣ ಬಿಡುಗಡೆ ಮಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಆಡಳಿತ ಅಧ್ಯಕ್ಷ ಮಂಜುನಾಥ್ ಗೌಡ ಅವರಿಗೆ ಧನ್ಯವಾದಗಳು ಎಂದು ಶಾಸಕರು ತಿಳಿಸಿದರು.

ಐದು ಕೃಷಿಕ ಸಮಾಜಕ್ಕೆ ಮಂಜೂರಾತಿ: ಎರಡು ನವಲಗುಂದ ಮತ್ತು ಅಣ್ಣಿಗೇರಿಗೆ
ರಾಜ್ಯ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥಗೌಡ ಎಸ್.ಆರ್. ಮಾತನಾಡಿ, ಸರಕಾರದಿಂದ ರಾಜ್ಯದಲ್ಲಿಯೇ ಕೇವಲ 5 ಕೃಷಿಕ ಸಮಾಜ ಕಟ್ಟಡಕ್ಕೆ ಸ್ಥಳ ತೆಗೆದುಕೊಳ್ಳಲು ಮಂಜೂರಾಗಿದ್ದು, ಆ 5ರಲ್ಲಿ ಅಣ್ಣಿಗೇರಿ ಮತ್ತು ನವಲಗುಂದ ತಾಲ್ಲೂಕುಗಳಿಗೆ ತಲಾ 10 ಲಕ್ಷ ರೂಪಾಯಿಗಳ ಚೆಕ್ ನೀಡಲಾಗಿದೆ. ಕೂಡಲೇ ಸ್ಥಳ ಖರೀದಿಸಿ, ಶಾಸಕರ ಸಹಕಾರದಿಂದ ಬೇಗನೆ ಕಟ್ಟಡ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು. ಇದೇ ವೇಳೆ ಸನ್ಮಾನ ಕಾರ್ಯಕ್ರಮವೂ ಜರುಗಿತು.

ಕಾರ್ಯಕ್ರಮದಲ್ಲಿ ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಅರವಿಂದಪ್ಪ ಎಮ್ ಕಟಗಿ, ಧಾರವಾಡ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ತಾಲ್ಲೂಕು ಅಧ್ಯಕ್ಷರುಗಳಾದ ಸೋಮಲಿಂಗಪ್ಪ ಬಳಿಗೇರ, ಎ.ಪಿ. ಗುರಿಕಾರ, ಸದಸ್ಯರಾದ ಪ್ರಕಾಶ ಶಿಗ್ಲಿ, ಡಿ.ಎಚ್. ಖುದ್ದನ್ನವರ, ನಾಗನಗೌಡ ಪಾಟೀಲ, ಉಮೇಶ ಸೋಮಾಪುರ, ಕರಿಯಪ್ಪ ನರಗುಂದ, ಪಾಂಡಪ್ಪ ದ್ಯಾವನೂರ, ನಾಗಲಿಂಗಪ್ಪ ದಳವಾಯಿ, ಬಸವರಾಜ ಕುಬಸದ ಹಾಗೂ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *