ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರಿಗಳಿಗೆ ಪ್ರಸಾದ ವಿನಿಯೋಗ: ರಾಮನಗರ ಸಿಲ್ಕ್ ಸಿಟಿ ವತಿಯಿಂದ ಅನ್ನದಾಸೋಹ

Spread the love

ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಸಾವಿರಾರು ಭಕ್ತಾದಿಗಳ ಸೇವೆಗಾಗಿ ರಾಮನಗರದ ಸಿಲ್ಕ್ ಸಿಟಿ ವತಿಯಿಂದ ಹನೂರು ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಹಮ್ಮಿಕೊಂಡಿರುವ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ ಎಂದು ಸಿಲ್ಕ್ ಸಿಟಿ ಅಧ್ಯಕ್ಷರಾದ ಪ್ರಕಾಶ್ ವಿ. ತಿಳಿಸಿದ್ದಾರೆ. ಫೆಬ್ರವರಿ 10ರಿಂದ ಆರಂಭವಾಗಿರುವ ಈ ಸೇವಾ ಕಾರ್ಯಕ್ರಮವು ಫೆಬ್ರವರಿ 13ರವರೆಗೆ ಸತತ ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆಯಲಿದ್ದು, ಪಾದಯಾತ್ರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

​ಮಲ್ಲಯ್ಯನಪುರ ಗ್ರಾಮದ ಬಳಿ ವಿಶೇಷ ಟೆಂಟ್ ನಿರ್ಮಿಸುವ ಮೂಲಕ ಭಕ್ತರಿಗೆ ಪ್ರತಿದಿನ ಊಟ, ಉಪಹಾರದ ಜೊತೆಗೆ ಬಿಸಿಲಿನ ತಾಪ ತಣಿಸಲು ಪಾನಕ, ಮಜ್ಜಿಗೆ ಹಾಗೂ ಎಲೆ-ಅಡಿಕೆ ವಿತರಿಸಲಾಗುತ್ತಿದೆ. ಕೇವಲ ಆಹಾರವಷ್ಟೇ ಅಲ್ಲದೆ, ಸುದೀರ್ಘ ಹಾದಿ ಕ್ರಮಿಸುವ ಭಕ್ತರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಔಷದೋಪಚಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪಾದಯಾತ್ರಿಗಳು ವಿಶ್ರಾಂತಿ ಪಡೆಯಲು ಮತ್ತು ಅವರ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

​ಈ ಸಂದರ್ಭದಲ್ಲಿ ಸಿಲ್ಕ್ ಸಿಟಿ ಜಿಲ್ಲಾ ಕಾರ್ಯದರ್ಶಿ ಬಿ. ಗೋಪಾಲ್, ಲತಾ ಗೋಪಾಲ್, ಬೋರಲಿಂಗಗೌಡ (ಕುಮಾರ್), ಉಸ್ತುವಾರಿ ಪ್ರಭಾಕರ್ ಎಲ್., ಕಾಂತರಾಜು ಹಾಗೂ ರೋಟರಿ ರಾಮಾಗಡ್ ರಾಕರ್ಸ್ ರಾಮನಗರದ ಅಧ್ಯಕ್ಷ ಪ್ರಕಾಶ ಎಂ.ಹೆಚ್., ಕಾರ್ಯದರ್ಶಿ ನಾಗೇಶ ಮತ್ತು ನಿರ್ದೇಶಕರುಗಳಾದ ತಿಮ್ಮಗೌಡ, ಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಾವಿರಾರು ಭಕ್ತರು ಈ ಅನ್ನದಾಸೋಹದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *