
ದಾವಣಗೇರೆ:ಕೌಟುಂಬಿಕ ಕಲಹದ ಕಿಚ್ಚು ದಾವಣಗೆರೆಯಲ್ಲಿ ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಲ್ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಜಿಲ್ಲೆಯನ್ನು ಈ ಘಟನೆ ಬೆಚ್ಚಿಬೀಳಿಸಿದೆ.
ದಾವಣಗೆರೆಯ ನಾಗನೂರು ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಈ ಭೀಭತ್ಸ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರ ಇಬ್ಬರು ಮಕ್ಕಳು ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮಕ್ಕಳ ಈ ನಿರ್ಧಾರದಿಂದ ತೀವ್ರವಾಗಿ ಮನನೊಂದಿದ್ದ ಚಂದ್ರಶೇಖರ್ ಅವರು, ತಮ್ಮ ತೋಟದ ಮನೆಯ ಬಳಿ ಕಾರನ್ನು ನಿಲ್ಲಿಸಿ, ಕಾರಿನ ಒಳಗೆ ಕುಳಿತು ಮೈಮೇಲೆ ಮತ್ತು ಕಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಕಿಯ ಜ್ವಾಲೆಗೆ ಕಾರು ಮತ್ತು ಚಂದ್ರಶೇಖರ್ ಅವರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಆತ್ಮಹತ್ಯೆ ಯತ್ನ ಹಾಗೂ ಚಂದ್ರಶೇಖರ್ ಅವರ ಸಾವಿನ ಹಿಂದೆ ಇರುವ ನಿಖರವಾದ ಕಾರಣಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೌಟುಂಬಿಕ ಕಲಹವು ಒಂದು ಸುಂದರ ಸಂಸಾರವನ್ನು ಬೀದಿಗೆ ತಂದಿರುವುದು ಸಾರ್ವಜನಿಕರಲ್ಲಿ ತೀವ್ರ ವಿಷಾದ ಮೂಡಿಸಿದೆ.

