ಆರೋಗ್ಯ ಕ್ರಾಂತಿ ಗುರಿ: ಪ್ರತಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಸಿಎಂ ಸಿದ್ದರಾಮಯ್ಯ

Spread the love

ಬೆಳಗಾವಿ: ರಾಜ್ಯದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತಿ ಜಿಲ್ಲೆಗೂ ಕಡ್ಡಾಯವಾಗಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ತಮ್ಮ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

​ಬೆಳಗಾವಿಯಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, “ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲಾ ಬಡ ಮತ್ತು ಮಧ್ಯಮ ವರ್ಗದವರು. ಇವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಸಿಗಬೇಕು. ಕೇವಲ ಕಟ್ಟಡ ಕಟ್ಟಿದರೆ ಸಾಲದು, ಅದಕ್ಕೆ ತಕ್ಕಂತೆ ತಜ್ಞ ವೈದ್ಯರನ್ನೂ ನೇಮಿಸುತ್ತೇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಭಾಕರ್ ಕೋರೆ ಅವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಕೋರೆ ಅವರಿಗೆ ಅಭಿನಂದನೆ ಸಲ್ಲಿಸಿದರು.

​ಅಸಮಾನತೆ ಅಳಿಸಲು ಕಾರ್ಯಕ್ರಮಗಳ ರೂಪಣೆ:

​ತಮ್ಮ ಸರ್ಕಾರವು ಅಸಮಾನತೆಯನ್ನು ಅಳಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಳ ಸಮುದಾಯಗಳಿಗೆ ಅವಕಾಶ ಮತ್ತು ಅನುಕೂಲಗಳನ್ನು ಕಲ್ಪಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. “ಅಸಮಾನತೆ ಇರುವವರೆಗೆ ತಳ ಸಮುದಾಯಗಳ ಜನ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.

​ಬೆಳೆ ಹಾನಿಗೆ ದಾಖಲೆ ಪರಿಹಾರ:

​ರಾಜ್ಯದಲ್ಲಿ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ರಾಜ್ಯದ ಎಂಟು ಜಿಲ್ಲೆಗಳಲ್ಲಿ ಶೇ.95ಕ್ಕಿಂತ ಅಧಿಕ ಮಳೆಯಾಗಿ ರಾಜ್ಯದಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿರುವ ಅಂದಾಜಿದೆ. ಈ ಬೆಳೆ ಹಾನಿಗೆ ದಾಖಲೆ ಮೊತ್ತದ ಪರಿಹಾರ ಹಣ ನೀಡಿ ರೈತರು, ಬೆಳೆಗಾರರು ಮತ್ತು ಕೃಷಿಕರ ನೆರವಿಗೆ ಧಾವಿಸಿದ್ದೇವೆ” ಎಂದು ಮಾಹಿತಿ ನೀಡಿದರು.

​ಗ್ಯಾರಂಟಿಗಳ ಯಶಸ್ಸು ಬಿಜೆಪಿಗೆ ಆತಂಕ ತಂದಿದೆ: ಸಿಎಂ ಗುಡುಗು

​ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿ ನಾಯಕರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ತೀವ್ರವಾಗಿ ಟೀಕಿಸಿದರು.

​”ನಮ್ಮ ಸರ್ಕಾರ ನುಡಿದಂತೆ ನಡೆದು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡುತ್ತಿದ್ದೇವೆ. ಬಿಜೆಪಿಯವರು ಎಲ್ಲವನ್ನೂ ಕಾಮಾಲೆಕಣ್ಣಿನಿಂದ ನೋಡುತ್ತಿದ್ದು, ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ” ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಗೆ ಎನ್‌ಡಿಆರ್‌ಎಫ್ ಅನುದಾನವನ್ನು ಬಳಸಲಾಗುತ್ತಿದೆ ಎಂಬ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿದರು. ಅಲ್ಲದೆ, ಕರ್ನಾಟಕದ ಗ್ಯಾರಂಟಿಗಳನ್ನು ಬಿಹಾರ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಕರಿಸುತ್ತಿದ್ದಾರೆ ಎಂದು ಸಿಎಂ ಹೇಳಿದರು.

​ನಾವು ವೇಗ ನೀಡಿ ಪೂರ್ಣಗೊಳಿಸಿದ್ದೇವೆ:

​”ಇಂದು ಬೆಳಗಾವಿಯ ಬಿಮ್ಸ್‌ ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 2017ರಲ್ಲಿ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಇಂದು ನಾನೇ ಅದನ್ನು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ. ಬಿಜೆಪಿಯ ಅವಧಿಯಲ್ಲಿ ಈ ಯೋಜನೆ ಕಾರ್ಯಗತವಾಗಿರಲಿಲ್ಲ. ನಾವು ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಿದ್ದೇವೆ. ಆಸ್ಪತ್ರೆಯ ನಿರ್ವಹಣೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡಿಲ್ಲ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

​ಮುಖ್ಯಮಂತ್ರಿ ಹುದ್ದೆಯ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ಮುಖ್ಯಮಂತ್ರಿ ಹುದ್ದೆಯ ವಿಷಯ ನಮ್ಮ ಪಕ್ಷದ ಆಂತರಿಕ ವಿಚಾರವಾಗಿದ್ದು, ಇದಕ್ಕೆ ಬಿಜೆಪಿ ತಲೆಕೆಡಿಸಿಕೊಳ್ಳುವುದು ಬೇಕಿಲ್ಲ. ಅವರು ತಮ್ಮ ಪಕ್ಷದ ಬಗ್ಗೆ ತಲೆಕೆಡಿಸಿಕೊಂಡರೆ ಸಾಕು” ಎಂದು ಕುಟುಕಿದರು.

​ಅಭಿವೃದ್ಧಿ ಯೋಜನೆಗಳಿಗೆ ಚಾಲನೆ:

​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (BIMS) ಆವರಣದಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದರು ಮತ್ತು ಗೃಹ ವೈದ್ಯರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದರು.

​ಇದಲ್ಲದೆ, ಬೆಳಗಾವಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದರು. ರಾಣಿ ಚೆನ್ನಮ್ಮ ವಿ.ವಿಯ ಹಿರೇಬಾಗೇವಾಡಿ ಹೊಸ ಆವರಣದಲ್ಲಿ ಪಿ.ಎಂ. ಉಷಾ ವಿವಿಧ ಕಟ್ಟಡಗಳ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ವಿವಿಯ ನೂತನ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.

​ಈ ಕಾರ್ಯಕ್ರಮಗಳಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಡಾ. ಎಂ.ಸಿ. ಸುಧಾಕರ್, ಎಸ್. ಪ್ರಕಾಶ್ ಪಾಟೀಲ್, ಆರ್.ಎಲ್.ಆರ್. ಬಿಟಿಎಂ ಸೇರಿ ಹಲವು ಗಣ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *