ಶನಿವಾರ, 21 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್
Top News

ಜನರ ಮನೆ ಬಾಗಿಲಿಗೆ ಸರ್ಕಾರ; ಅಭಿವೃದ್ಧಿಯಲ್ಲಿ ನವಲಗುಂದ ಮುಂಚೂಣಿ: ಸಚಿವ ಸಂತೋಷ್ ಲಾಡ್

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಜನರ ಮನೆ ಬಾಗಿಲಿಗೆ ಸರ್ಕಾರ; ಅಭಿವೃದ್ಧಿಯಲ್ಲಿ ನವಲಗುಂದ ಮುಂಚೂಣಿ: ಸಚಿವ ಸಂತೋಷ್ ಲಾಡ್
  • Spread the love Recent Views 8 ನವಲಗುಂದ: “ಜನರ ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ” ಎಂಬ ಧ್ಯೇಯದೊಂದಿಗೆ ಪ್ರಜಾಸೇವಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ನವಲಗುಂದ: “ಜನರ ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ” ಎಂಬ ಧ್ಯೇಯದೊಂದಿಗೆ ಪ್ರಜಾಸೇವಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ತರುವ ಮೂಲಕ ಶಾಸಕ ಎನ್.ಎಚ್. ಕೋನರಡ್ಡಿ ಅವರು ನವಲಗುಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶ್ಲಾಘಿಸಿದರು.

ನಗರದ ಮಾಡೆಲ್ ಹೈಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಇಲಾಖೆಯ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದಕ್ಕೂ ಮುನ್ನ ಧಾರವಾಡ ಜಿಲ್ಲೆಯ 388 ಗ್ರಾಮಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಮಾದರಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಸಚಿವರು ವೀಕ್ಷಿಸಿದರು. ಮೊದಲ ಹಂತದಲ್ಲಿ ಹೆಬಸೂರ, ಕಿರೇಸೂರ, ಬ್ಯಾಹಟ್ಟಿ, ಸುಳ್ಳ, ಹಳಿಯಾಳ, ಮಂಟೂರ, ನಾಗರಹಳ್ಳಿ, ಬಂಡಿವಾಡ ಹಾಗೂ ಶಿರಗುಪ್ಪಿ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದ್ದು, ಈ ಯೋಜನೆಯಿಂದ ಬರಗಾಲದ ಸಂದರ್ಭದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಯಡಿ ನಿರ್ಮಾಣವಾಗುತ್ತಿರುವ ಚಾಂಗದೇವರ ಯಮನೂರ ಆರತಿ ಕಾಮಗಾರಿಯನ್ನೂ ಸಚಿವರು ಪರಿಶೀಲಿಸಿದರು. ಯಮನೂರ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ವಸ್ತ್ರ ಬದಲಾವಣೆ ಕೊಠಡಿಗಳು, ಪುಣ್ಯಸ್ನಾನಕ್ಕಾಗಿ ಬೆಣ್ಣಿಹಳ್ಳಕ್ಕೆ ಮೆಟ್ಟಿಲುಗಳ ಸ್ನಾನಘಟ್ಟ, ಪಾರ್ಕಿಂಗ್ ವ್ಯವಸ್ಥೆ, ವೇಸ್ಟ್ ವೇರ್ ಏರಿ ನಿರ್ಮಾಣ, ಪಿಚ್ಚಿಂಗ್ ಹಾಗೂ ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಶಾಸಕ ಎನ್.ಎಚ್. ಕೋನರಡ್ಡಿ ಅವರ ದೂರದೃಷ್ಟಿಯ ಅಭಿವೃದ್ಧಿ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಪ್ರತಿ ವರ್ಷ ಮಳೆಗಾಲದಲ್ಲಿ ನವಲಗುಂದ-ಇಬ್ರಾಹಿಂಪುರ ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ರಸ್ತೆಯ ಎರಡು ಹಳ್ಳಗಳಿಗೆ ಸೇತುವೆ ನಿರ್ಮಿಸಲು ₹1.50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್ ಅವರು ಎರಡೂ ನೂತನ ಸೇತುವೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಾದಾಯಿ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಶೀಘ್ರ ಅನುಮತಿ ಪಡೆದು ಕಾಮಗಾರಿ ಆರಂಭಿಸಬೇಕು ಹಾಗೂ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡ ರಘುನಾಥ ನಡುವಿನಮನಿ ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಸದಾ ರೈತರ ಪರವಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ರೈತರಿಗೆ ಅನುಕೂಲವಾಗುವ ‘ತೇಗದ ಸಿರಿ’ ಯೋಜನೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಅಲ್ಲದೆ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ಶಾಸಕ ಎನ್.ಎಚ್. ಕೋನರಡ್ಡಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ, ಶಾಹಲಂ ಹುಸೇನ್, ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ನವಲಗುಂದ ತಹಶೀಲ್ದಾರ್ ಸುಧೀರ ಸಾವಕಾರ, ಹುಬ್ಬಳ್ಳಿ ತಹಶೀಲ್ದಾರ್ ಸಂತೋಷ್ ಹಿರೇಮಠ, ಅಣ್ಣಿಗೇರಿ ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಕೆ.ಎನ್.ಎನ್.ಎಲ್. ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಜಾಲಗಾರ, ಡಿಎಸ್‌ಪಿ ಶಿವಾನಂದ ಕಟಗಿ, ಸಿಪಿಐ ರವಿ ಕಪ್ಪತ್ತನವರ, ಅಬಕಾರಿ ಸಿಪಿಐ ರಾಮು ಆರೆನ್ನವರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ನಿರ್ದೇಶಕರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT