
ಹಾಸನ: ತಾಲ್ಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ನುಗ್ಗಿದ ದಾರುಣ ಘಟನೆ ನಡೆದಿದ್ದು, ಕನಿಷ್ಠ 6 ಜನರು ಮೃತಪಟ್ಟು, ಅಂದಾಜು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದಾಗ, ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಲಾರಿಗೆ ಬೈಕ್ ಅಡ್ಡ ಬಂದಿದೆ. ಬೈಕನ್ನು ತಪ್ಪಿಸಲು ಯತ್ನಿಸಿದ ಕ್ಯಾಂಟರ್ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ದಾಟಿ ಮೆರವಣಿಗೆಯ ಮೇಲೆ ಎರಗಿದ್ದಾನೆ. ಪರಿಣಾಮ, ಸ್ಥಳದಲ್ಲಿದ್ದ 6 ಜನರು ಮೃತಪಟ್ಟಿದ್ದು, ಅಂದಾಜು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ಗಾಯಾಳುಗಳನ್ನು ಕೂಡಲೇ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿ, “ಇದು ದುರದೃಷ್ಟಕರ ಘಟನೆ. 6 ಜನರು ಮೃತಪಟ್ಟಿರುವುದಾಗಿ ಮಾಹಿತಿ ಬಂದಿದೆ. ಇಂತಹ ಘಟನೆ ನಡೆಯಬಾರದಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ತನಿಖೆ ನಂತರ ಘಟನೆಗೆ ಸ್ಪಷ್ಟ ಕಾರಣ ತಿಳಿದುಬರಲಿದೆ” ಎಂದರು. ಅಲ್ಲದೆ, ಶಾಸಕ ಎಚ್.ಡಿ. ರೇವಣ್ಣ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

