
ಕೊಪ್ಪಳ: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಲು ಕೌಶಲ್ಯ ತರಬೇತಿಗಳು ಅತ್ಯಗತ್ಯ ಎಂದು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಅವರು ಅಭಿಪ್ರಾಯಪಟ್ಟರು. ನಗರದ ಭಾಗ್ಯನಗರದ ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಗ್ರಾಮೀಣ ಮಹಿಳೆಯರಿಗಾಗಿನ 10 ದಿನಗಳ ಆರಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಆರಿ ಕೌಶಲ್ಯವನ್ನು ಕರಗತ ಮಾಡಿಕೊಂಡರೆ ತಮ್ಮ ಸಂಸಾರದ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಾಧ್ಯವಾಗುತ್ತದೆ. ಇಂತಹ ಸುಸಂದರ್ಭಗಳನ್ನು ಪ್ರತಿಯೊಬ್ಬ ಮಹಿಳೆಯೂ ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗದತ್ತ ಹೆಜ್ಜೆ ಇಡಬೇಕು ಎಂದು ಅವರು ಕರೆ ನೀಡಿದರು.
ಈ ತರಬೇತಿ ಕಾರ್ಯಕ್ರಮವನ್ನು ಮಣಿಪಾಲದ T M G ಸುನಿಧಿ ಫೌಂಡೇಶನ್ ಟ್ರಸ್ಟ್, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಕಾರ್ಕಳದ ಶ್ರೀನಿವಾಸ ಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಗಲಕೋಟೆ ಸೆಲ್ಕೊ ಸಂಸ್ಥೆಯ ತರಬೇತಿ ಅಧಿಕಾರಿ ಶಿವಕುಮಾರ್ ಅವರು ತರಬೇತಿಯ ಉದ್ದೇಶ ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕವನ ಹಾಗೂ ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್ನ ಸಹ-ಸಂಸ್ಥಾಪಕ ಹಾಗೂ ಫ್ಯಾಷನ್ ಡಿಸೈನರ್ ಸುತೇಜ ಆಶ್ರೀತ್ ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮೀಣ ಭಾಗದ 30 ಮಹಿಳೆಯರು ಈ ಹತ್ತು ದಿನಗಳ ತರಬೇತಿ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಕಾವ್ಯ ಸ್ವಾಗತಿಸಿದರು ಮತ್ತು ಕುಮಾರಿ ನೇತ್ರಾವತಿ ವಂದನಾರ್ಪಣೆ ಮಾಡಿದರು.

