
ಬೆಂಗಳೂರು: ಮೋಟಾರಾಮ್ ದಂಪತಿಗೆ ಹಲ್ಲೆ ಮಾಡಿ ದರೋಡೆ; ಒಂದು ಕೋಟಿ ಒಂದು ಲಕ್ಷ ರೂ. ವಶಕ್ಕೆ ಪಡೆದ ಹುಳಿಮಾವು ಪೊಲೀಸರು.
ಬೆಂಗಳೂರು: ಒಂದು ಕೋಟಿ ಒಂದು ಲಕ್ಷ ರೂಪಾಯಿ ನಗದು ಹಣವನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಎಂಟು ಆರೋಪಿಗಳ ಗ್ಯಾಂಗ್ ಅನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ದರೋಡೆ ಮಾಡಲಾಗಿದ್ದ ಸಂಪೂರ್ಣ ಹಣವನ್ನೂ (ಒಟ್ಟು ₹1,01,00,000) ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಹುಳಿಮಾವು ಸಮೀಪದ ಅಕ್ಷಯ ನಗರದಲ್ಲಿ ಈ ಘಟನೆ ನಡೆದಿತ್ತು. ಅಡಿಕೆ ಮಂಡಿಗೆ ನೀಡಬೇಕಿದ್ದ ಹಣವನ್ನು ಪಡೆಯಲು ಹೇಮಂತ್ ಎಂಬುವವರು ಮೋಟಾರಾಮ್ ಎಂಬವರ ಬಳಿ ಬಂದಿದ್ದರು. ಈ ವೇಳೆ ಮೋಟಾರಾಮ್ ಅವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಅಕ್ಷಯ ನಗರದ ಪಾರ್ಕ್ ಬಳಿ ಬಂದಿದ್ದರು ಎನ್ನಲಾಗಿದೆ. ಹಣವನ್ನು ಪರಿಶೀಲಿಸಲು ಹೇಮಂತ್ ಅವರು ಕಾರಿನೊಳಗೆ ಕುಳಿತುಕೊಂಡಿದ್ದರು.
ಈ ಸಂದರ್ಭದಲ್ಲಿ ದರೋಡೆ ಗ್ಯಾಂಗ್ನ ನರಸಿಂಹ ಮತ್ತು ಜೀವನ್ ಎಂಬ ಇಬ್ಬರು ಆರೋಪಿಗಳು ಕಾರಿನ ಬಳಿ ಬಂದು, ಹೇಮಂತ್ ಅವರಿಗೆ ಬೆದರಿಸಿ ಹಲ್ಲೆ ಮಾಡಲು ಯತ್ನಿಸಿ ಹಣದ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಮೋಟಾರಾಮ್ ಅವರು ಕಾರನ್ನು ಲಾಕ್ ಮಾಡಿ ಚಾಲನೆ ಮಾಡಿದ್ದಾರೆ. ಆದರೆ, ದರೋಡೆಕೋರರು ಬೈಕ್ನಲ್ಲಿ ಕಾರನ್ನು ಬೆನ್ನಟ್ಟಿ, ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ್ದಾರೆ.
ಸ್ವಲ್ಪ ದೂರದಲ್ಲಿರುವ ಖಾಲಿ ಸೈಟ್ ಬಳಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರ ಗ್ಯಾಂಗ್, ಹೇಮಂತ್ ಮತ್ತು ಮೋಟಾರಾಮ್ ದಂಪತಿಯ ಮೇಲೆ ಹಲ್ಲೆ ಮಾಡಿ, ಒಟ್ಟು ಒಂದು ಕೋಟಿ ಒಂದು ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿದ್ದರು.
ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಅವರ ತಂಡವು ದಾಳಿ ನಡೆಸಿ, ಕೆಲವೇ ಸಮಯದಲ್ಲಿ ಒಟ್ಟು ಎಂಟು ಜನರ ಗ್ಯಾಂಗ್ ಅನ್ನು ವಶಕ್ಕೆ ಪಡೆದು, ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

