ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ: ಕೇಂದ್ರದ ಉನ್ನತ ಮಟ್ಟದ ತಂಡದಿಂದ ಕ್ಷೇತ್ರ ಪರಿಶೀಲನೆ, ಒಣಗಿದ ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ; ರೈತರ ಅಳಲು ಆಲಿಸಿದ ಅಧಿಕಾರಿಗಳು

Spread the love

ಚಾಮರಾಜನಗರ, ಅ.6: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ತಂಡ (IMCT) ಮಂಗಳವಾರ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ಹಾನಿ, ಕುಡಿಯುವ ನೀರು ಮತ್ತು ಮೇವಿನ ಕೊರತೆ ಸೇರಿದಂತೆ ಬರದ ವಾಸ್ತವ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು.

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತ ಡಾ. ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ಸಲಹೆಗಾರ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಕೃಷಿ ಸಚಿವಾಲಯದ MNCFC ಉಪನಿರ್ದೇಶಕ ಕರಣ್ ಚೌಧರಿ ಅವರನ್ನೊಳಗೊಂಡ ತಂಡವು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿತು.

ಕೆರೆಹಳ್ಳಿಯಲ್ಲಿ ಒಣಗಿದ ಜೋಳ ವೀಕ್ಷಣೆ:ಮೊದಲಿಗೆ ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ರೈತ ಮಾದಪ್ಪ ಅವರ ಜಮೀನಿಗೆ ಭೇಟಿ ನೀಡಿದ ತಂಡವು ಸಂಪೂರ್ಣ ಒಣಗಿ ಹೋಗಿದ್ದ ಜೋಳದ ಬೆಳೆಯನ್ನು ವೀಕ್ಷಿಸಿತು. ಈ ವೇಳೆ ರೈತರು, “ಈ ಭಾಗದಲ್ಲಿ ತೊಗರಿ, ಜೋಳ, ಕಬ್ಬು, ಹುರಳಿ ಹಾಗೂ ಅರಿಶಿನ ಬೆಳೆಗಳನ್ನು ಬೆಳೆಯುತ್ತೇವೆ. ಬಿತ್ತನೆ ಸೇರಿದಂತೆ ಎಕರೆಗೆ ₹30ರಿಂದ ₹40 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಆದರೆ ಮಳೆ ಇಲ್ಲದೆ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ವೈಜ್ಞಾನಿಕವಾಗಿ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ (ಶ್ರೀರೂಪ), ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹಾಗೂ ಕೃಷಿ ಜಂಟಿ ನಿರ್ದೇಶಕ ಭಾನುಪ್ರಕಾಶ್ ಅವರು ಜಿಲ್ಲೆಯ ಬೆಳೆ ಹಾನಿಯ ವಿವರಗಳನ್ನು ಕೇಂದ್ರ ತಂಡಕ್ಕೆ ನೀಡಿದರು.

ಗೋಶಾಲೆ, ಕೆರೆ ಪರಿಶೀಲನೆ:ಬಳಿಕ ಮಲೆಯೂರಿನ ಕನಕಗಿರಿ ಜೈನ ಗೋಶಾಲೆಗೆ ಭೇಟಿ ನೀಡಿದ ತಂಡವು ಗೋವುಗಳ ನಿರ್ವಹಣೆ ಹಾಗೂ ಮೇವು ದಾಸ್ತಾನು ಪರಿಶೀಲಿಸಿತು. ನಂತರ ಕುಲಗಾಣ ಗ್ರಾಮದಲ್ಲಿ VB-G RAM G ಯೋಜನೆಯಡಿ ನಡೆಯುತ್ತಿದ್ದ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. “ಕೆರೆಗೆ ಎಷ್ಟು ವರ್ಷಗಳಿಂದ ನೀರು ಬಂದಿಲ್ಲ?” ಎಂದು ತಂಡದ ಅಧಿಕಾರಿಗಳು ಕಾರ್ಮಿಕರು ಹಾಗೂ ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಕಳೆದ ಎರಡು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲ ಎಂದು ಅವರು ತಿಳಿಸಿದರು.

ಗುಂಡ್ಲುಪೇಟೆಯಲ್ಲಿ ಸೂರ್ಯಕಾಂತಿ ಬೆಳೆ ನಷ್ಟ:ಮಧ್ಯಾಹ್ನ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ಲೋಕೇಶ್ವರಿ ಹಾಗೂ ನಾಗರಾಜು ಅವರ ಜಮೀನಿಗೆ ಭೇಟಿ ನೀಡಿದ ತಂಡವು ಒಣಗಿ ಹೋಗಿದ್ದ ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿತು. ಈ ವೇಳೆ ರೈತರು, “ನೀರಿನ ಕೊರತೆಯಿಂದ ಬೆಳೆ ಕೈಗೆ ಬಂದಿಲ್ಲ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.

ಕೃಷಿ ವಿಜ್ಞಾನ ಕೇಂದ್ರದ ಡಾ. ಶೃತಿ ಅವರು, ಹಿಂದಿನ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರೂ ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಕೇಂದ್ರ ತಂಡಕ್ಕೆ ವಿವರಿಸಿದರು.

ಅಧಿಕಾರಿಗಳೊಂದಿಗೆ ಸಭೆ:ಸಂಜೆ ಗುಂಡ್ಲುಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲೆಯ ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಅಭಾವದ ಕುರಿತು ಸಮಗ್ರ ವರದಿಯನ್ನು ಕೇಂದ್ರ ತಂಡದ ಮುಂದೆ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಕುಡಿಯುವ ನೀರು ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ತೋಟಗಾರಿಕೆ ಜಂಟಿ ನಿರ್ದೇಶಕ ಗಿರೀಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಇಮಾನ್ಯುವೆಲ್ ಸಂತೋಷ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಕಾರ್ತಿಕ್ ಗೌಡ ಹನೂರು.

Leave a Reply

Your email address will not be published. Required fields are marked *